ಲೋಕಸಭೆ ಚುನಾವಣೆಯಲ್ಲಿ ಶಿವಸೇನೆಯು ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳದೆ ಎನ್‌ಸಿಪಿ ಜತೆಗೆ ಕೈ ಜೋಡಿಸಲಿದೆ ಎಂಬ ವದಂತಿಗೆ ಪುಷ್ಟಿ ನೀಡುವ ಘಟನೆ ಮಂಗಳವಾರ ನಡೆದಿದ್ದು, ಬಿಜೆಪಿ ನಾಯಕ ಆಡ್ವಾಣಿ ಅವರನ್ನು ಭೇಟಿ ಮಾಡಲು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ನಿರಾಕರಿಸಿದ್ದಾರೆ.ಇಲ್ಲಿಯ ಬಿಜೆಪಿ ಕಚೇರಿಗೆ ಆಗಮಿಸಿದ್ದ ಆಡ್ವಾಣಿ ಅವರು ಠಾಕ್ರೆ ಮನೆಗೂ ಭೇಟಿ ನೀಡಲು ಬಯಸಿದ್ದರು. ಠಾಕ್ರೆ ಮನೆಯಲ್ಲೇ ಇದ್ದರೂ ಈ ಭೇಟಿಗೆ ಅನುಮತಿ ಸಿಗದೆ ಆಡ್ವಾಣಿ ಮುಜುಗರಕ್ಕೆ ಒಳಗಾದರು.ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಆಡ್ವಾಣಿಯವರು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಬಿಜೆಪಿಯಿಂದ ನಮಗೆ ದೊರೆತದ್ದೇ ಮಧ್ನಾಹ್ನ, ಅವರು ಠಾಕ್ರೆ ಅವರನ್ನು ಭೇಟಿಯಾಗಬೇಕು ಅಂದುಕೊಂಡದ್ದು ಬೆಳಿಗ್ಗೆ, ಆ ಕಾರಣಕ್ಕಾಗಿ ಭೇಟಿ ಸಾಧ್ಯವಾಗಿಲ್ಲ ಎಂದು ಸೇನೆಯ ವಕ್ತಾರ ನೀಲಮ್ ಗೋರೆ ದೂರಿದ್ದಾರೆ.ಬಿಜೆಪಿ ಮುಖಂಡರಿಗೆ ಅರಿವಿರಬೇಕು, ಬಾಳ ಠಾಕ್ರೆಯವರಿಗೆ ಪ್ರತಿದಿನ ನಿರ್ಧರಿತವಾದ ಕಾರ್ಯಕ್ರಮಗಳಿರುತ್ತವೆ, ಅದನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಗೋರೆ ಹರಿಹಾಯ್ದಿದ್ದಾರೆ. ಈ ಹಿಂದೆ ಎನ್‌ಡಿಎ ಮೈತ್ರಿಕೂಟದದಲ್ಲಿದ್ದ ಶಿವಸೇನೆ ಬಿಜೆಪಿಯ ಹಳೇಯ ಬೆಂಬಲಿಗ ಪಕ್ಷ. ಆದರೆ ಇತ್ತೀಚೆಗೆ ಭಾರತೀಯ ಜನತಾಪಕ್ಷದೊಂದಿಗೆ ಮುನಿಸಿಕೊಂಡಿರುವ ಸೇನೆ, ಎನ್‌ಸಿಪಿ ಜೊತೆ ಮೈತ್ರಿಗೆ ಮುಂದಾಗಿತ್ತು. |