ಮದ್ರಾಸ್ ಹೈಕೋರ್ಟ್ ಆವರಣದೊಳಗೆ ಪ್ರತಿಭಟನೆ ನಡೆಸುತ್ತಿದ್ದ ವಕೀಲರ ವಿರುದ್ಧ ಪೊಲೀಸರು ಒಳನುಗ್ಗಿ ಕ್ರಮ ಕೈಗೊಳ್ಳಲು ಅವರಿಗೆ ಅನುಮತಿ ನೀಡಿದವರು ಯಾರು ಎಂಬುದನ್ನು 24ಗಂಟೆಯೊಳಗೆ ಉತ್ತರ ನೀಡುವಂತೆ ಸರ್ವೋಚ್ಛನ್ಯಾಯಾಲಯ ತಮಿಳುನಾಡು ಸರಕಾರಕ್ಕೆ ಬುಧವಾರ ಸೂಚನೆ ನೀಡಿದೆ.
ಅಲ್ಲದೇ ಹೈಕೋರ್ಟ್ ಆವರಣದಲ್ಲಿರುವ ಪೊಲೀಸ್ ಠಾಣೆಯನ್ನು ಶೀಘ್ರವೇ ಸ್ಥಳಾಂತರಿಸುವಂತೆ ಅಪೆಕ್ಸ್ ಕೋರ್ಟ್ ಸರಕಾರಕ್ಕೆ ತಾಕೀತು ಮಾಡಿದ್ದು, ಅದಕ್ಕೆ ತಾನು ಬದ್ದವಾಗಿರುವುದಾಗಿ ಸರಕಾರ ಈ ಸಂದರ್ಭದಲ್ಲಿ ತಿಳಿಸಿದೆ.
ಮುಷ್ಕರ ನಿರತ ವಕೀಲರ ಕ್ರಮವನ್ನು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡ ಸರ್ವೋಚ್ಛನ್ಯಾಯಾಲಯ, ನ್ಯಾಯಾಲಯದ ಒಳಗಡೆಯೇ ಘೋಷಣೆಗಳನ್ನು ಕೂಗಿರುವ ವಕೀಲರ ನಡವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ ವಕೀಲರ ಜಖಂಗೊಂಡ ಕಾರು ಹಾಗೂ ಹೈಕೋರ್ಟ್ ಕಟ್ಟಡಕ್ಕಾದ ಹಾನಿ ಮತ್ತು ಗಾಯಗೊಂಡ ವಕೀಲರಿಗೆ ಪರಿಹಾರ ಘೋಷಿಸುವಂತೆ ರಾಜ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ತಿಳಿಸಿದ್ದು, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. |