ಬಳಸಿದ ಸಿರಿಂಜ್ ಮರುಬಳಕೆ ಮಾಡಿದ ಹಾಗೂ ಇತರ ಕಾರಣಗಳಿಂದಾಗಿ ಹೆಪಟೈಟಿಸ್-ಬಿ ಎಂಬ ಮಾರಕ ರೋಗಕ್ಕೆ ತುತ್ತಾಗಿ ಗುಜರಾತಿನ ಮೊದಾಸಾದಲ್ಲಿ ಬಲಿಯಾದವರ ಸಂಖ್ಯೆ 46ಕ್ಕೇರಿರುವಂತೆಯೇ, ಹಚ್ಚೆ ಹಾಕಿಸಿಕೊಂಡಿರುವುದೂ ಈ ವೈರಸ್ ಹರಡಲು ಕಾರಣ ಎಂಬ ಅಂಶವೊಂದು ಬೆಳಕಿಗೆ ಬಂದಿದೆ.
ಸಬರಕಾಂತ ಪ್ರದೇಶದ ಬಾಯಾಡ್ ತಾಲೂಕಿನ ಚೋಯಿಲ ಎಂಬಲ್ಲಿನ 18ರ ಹರೆಯದ ರಮೇಶ್ ಝಾಲಾ ಹಚ್ಚೆಯ ಹುಚ್ಚು ಹೆಚ್ಚಾದ ಕಾರಣಕ್ಕೆ ಈಗ ಆಸ್ಪತ್ರೆಯಲ್ಲಿರಬೇಕಾಯಿತೆಂಬುದರ ಬಗ್ಗೆ ಈಗ ವಿಷಾದವಿದೆ. ನಾಲ್ಕು ತಿಂಗಳ ಹಿಂದೆ ಆತ ಪವಾಗಢದ ಮಹಾಕಾಳಿ ಮಂದಿರಕ್ಕೆ ಹೋಗಿದ್ದ ಸಂದರ್ಭ, ಕಳಪೆ ಹಚ್ಚೆ ಹಾಕುವವನ ಬಳಿಗೆ ಹೋಗಿ ಕೈ ತೋರಿಸಿದ್ದ. ಕೈಯಲ್ಲಿ ಹಚ್ಚೆ ಹಾಕಿಸಿಕೊಳ್ಳಲು ಬಳಸಿದ್ದ ಸೂಜಿಯಿಂದಲೇ ಈ ವೈರಸ್ ಈತನಿಗೆ ಹರಡಿರಬಹುದು ಎಂಬುದು ವೈದ್ಯರ ಸಂದೇಹ.
ಸೋಂಕುಪೀಡಿತ, ಪುನರ್ಬಳಕೆ ಮಾಡಿದ ಸಿರಿಂಜ್‌ನಿಂದಲೇ ಹೆಚ್ಚಿನವರು ಈ ರೋಗದ ಬಾಧೆಗೀಡಾಗಿದ್ದರೆ, ಝಾಲಾನಿಗೆ ಸೋಂಕುಪೀಡಿತ ಹಚ್ಚೆಯ ಸೂಜಿಯಿಂದಲೇ ಇದು ಬಂದಿದೆ.
ಹಚ್ಚೆ ಹಾಕಿಸಿಕೊಳ್ಳುವವರು ಸುಲಭವಾಗಿ ಹೆಪಟೈಟಿಸ್ -ಬಿ ವೈರಸ್‌ನ ಸೋಂಕಿಗೆ ಒಳಗಾಗುವುದು ವಿದೇಶದಲ್ಲಿ ಸಾಮಾನ್ಯ. ಆದರೆ ಮೊದಾಸಾದಲ್ಲಿ ಈ ರೀತಿ ಪತ್ತೆಯಾಗಿದ್ದು ಇದೇ ಮೊದಲು ಎಂದಿದ್ದಾರೆ ಜನರಲ್ ಆಸ್ಪತ್ರೆಯ ಡಾ.ಡಿ.ಎಂ.ದಾವೆ. ಆಸ್ಪತ್ರೆಯಲ್ಲಿ ದಾಖಲಾದ 140 ಕೇಸುಗಳಲ್ಲಿ, ಹಚ್ಚೆ ಹಾಕಿಸಿಕೊಳ್ಳುವ ಯಂತ್ರದಿಂದ ಸೋಂಕಿಗೆ ತುತ್ತಾಗಿದ್ದು ಈ ಹುಡುಗ ಮಾತ್ರ ಎನ್ನುತ್ತಾರವರು.
ಈ ಮಧ್ಯೆ, ಲಸಿಕೆ ನೀಡುವುದಾಗಿ ಎನ್‌ಜಿಒ ಕಾರ್ಡ್ ತೋರಿಸಿ, ಈಗಾಗಲೇ ಬೆಚ್ಚಿರುವ ಸ್ಥಳೀಯರನ್ನು ಸುಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅವರೀಗ ಮನೆಮನೆಗೆ ತೆರಳಿ ಕೇವಲ 12 ರೂ.ಗೆ ನಾಳೆ ಲಸಿಕೆ ನೀಡುತ್ತೇವೆ ಎಂದು ಮರುಳುಗೊಳಿಸುತ್ತಾ, ಸಾವಿರಾರು ರೂಪಾಯಿಗಳ 'ಸಂಪಾದನೆ' ಮಾಡಿ ಪರಾರಿಯಾಗುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಸಮರೋಪಾದಿ ಲಸಿಕೆ ಕಾರ್ಯಕ್ರಮ ಗುಜರಾತಿನಲ್ಲಿ ಹೆಪಟೈಟಿಸ್ ಬಿ ರೋಗದಿಂದ ಅತೀ ಹೆಚ್ಚು ಬಾಧಿತವಾಗಿರುವ ಮೊದಾಸಾ ಪಟ್ಟಣದಲ್ಲಿ 60 ಸಾವಿರ ಜನಸಂಖ್ಯೆಯಿದ್ದು, ಈಗಾಗಲೇ 56 ಸಾವಿರದಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.
ಈ ಮಧ್ಯೆ, ಸೋಂಕು ಪೀಡಿತ ಸಿರಿಂಜ್ ಬಳಸಿದ ಸ್ಥಳೀಯ ವೈದ್ಯ ಗೋವಿಂದ ಪಟೇಲ್ ಮತ್ತು ಆತನ ಪುತ್ರ ಚಿಂತನ್ ವಿರುದ್ಧ ದಂಡನೀಯ ನರಹತ್ಯೆ (ಕಲ್ಪೆಬಲ್ ಹೋಮಿಸೈಡ್) ಕೇಸು ದಾಖಲಿಸಲಾಗಿದೆ. ಆದರೆ ಅವರಿಬ್ಬರು ತಲೆ ಮರೆಸಿಕೊಂಡಿದ್ದಾರೆ. |