ನೇಪಾಳದ ಮಾವೋವಾದಿ ಸಂಘಟನೆಗಳು ಭಾರತದಲ್ಲಿರುವ ನಕ್ಸಲೀಯರೊಂದಿಗೆ ಕೈಜೋಡಿಸಿದ್ದಾರೆಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಬುಧವಾರ ಕೇಂದ್ರ ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.
ಭಾರತದಲ್ಲಿರುವ ನಕ್ಸಲೀಯರಿಗೆ ನೇಪಾಳದ ಮಾವೋವಾದಿ ಸಂಘಟನೆಗಳು ನೆರವು ನೀಡುತ್ತಿವೆ ಎಂಬುದಕ್ಕೆ ಯಾವುದೇ ಖಚಿತ ಸಾಕ್ಷ್ಯಾಧಾರ ಇಲ್ಲ ಎಂದು ಶೂನ್ಯವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಗೃಹಸಚಿವ ಪಿ.ಚಿದಂಬರಂ ತಿಳಿಸಿದರು.
ಅಲ್ಲದೇ ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಆ ಭಾಗದಲ್ಲಿ ಸರಕಾರ ಕಣ್ಗಾವಲು ಇರಿಸಿರುವುದಾಗಿ ಸ್ಪಷ್ಟಪಡಿಸಿದರು.
ನಕ್ಸಲೀಯರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಚಿದಂಬರಂ, ಒಂದು ವೇಳೆ ಅವರು ಶಸ್ತ್ರಾಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬರುವುದಾಗಿ ಮುಕ್ತವಾಗಿ ಸ್ವಾಗತಿಸುವುದಾಗಿ ಹೇಳಿದರು.
ಅಭಿವೃದ್ದಿಯ ವಿಷಯದಲ್ಲಿ ನಕ್ಸಲೀಯರು ತುಂಬಾ ಕೆಟ್ಟ ಶತ್ರುಗಳಾಗಿದ್ದಾರೆ ಎಂದು ಗಂಭೀರವಾಗಿ ಆಪಾದಿಸಿ, ಶಾಲೆ, ದೂರವಾಣಿ ಟವರ್ ಹಾಗೂ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಾರೆ. ಒಂದರ್ಥದಲ್ಲಿ ನಕ್ಸಲೀಯರು ತತ್ವಶಾಸ್ತ್ರವನ್ನೇ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಅಭಿವೃದ್ದಿಯತ್ತ ಮುನ್ನುಗ್ಗುತ್ತಿರುವ ಸರಕಾರದ ವಿರುದ್ಧ ಶಸ್ತ್ರಾಸ್ತ್ರ ಹೋರಾಟ ನಡೆಸುವುದೇ ನಕ್ಸಲೀಯರ ಗುರಿ ವಿನಃ, ಅವರದ್ದು ಅಭಿವೃದ್ದಿಯ ಹೋರಾಟವಲ್ಲ ಎಂದು ಹೇಳಿದರು.
ಈ ಮಾಹಿತಿಯನ್ನು ನೀಡುತ್ತಿದ್ದಂತೆಯೇ ಬಿಜೆಪಿಯ ಶ್ರೀಗೋಪಾಲ್ ವ್ಯಾಸ್ ಅವರು, ಎಡಪಕ್ಷಗಳ ಬೆಂಬಲ ಪಡೆದು ಸರಕಾರ ನಡೆಸುತ್ತಿದ್ದ ನೀವು ಎಡಪಂಥೀಯ ಹೋರಾಟವನ್ನು ಸರಕಾರ ಯಾವ ರೀತಿಯಲ್ಲಿ ಮಟ್ಟ ಹಾಕಿದೆ ಎಂಬುದನ್ನು ವಿವರಿಸಬೇಕು ಎಂದು ಪ್ರಶ್ನಿಸಿದರು. ವ್ಯಾಸ್ ಪ್ರಶ್ನೆಯ ಬಳಿಕ ಎಡಪಕ್ಷಗಳು ಪ್ರತಿಭಟನೆ ನಡೆಸಿದವು.
ಅದಕ್ಕೆ ಸಮಜಾಯಿಷಿ ನೀಡಿದ ಚಿದಂಬರಂ, ನೀವು ಕೇಳಿದ ಪ್ರಶ್ನೆಯಲ್ಲಿ ಸ್ವಲ್ಪ ತಪ್ಪಿದೆ, ದಯವಿಟ್ಟು ಈ ಸಮಸ್ಯೆಯನ್ನು ಎಡಪಂಥೀಯ ಉಗ್ರಗಾಮಿ ಹೋರಾಟಕ್ಕೂ ಎಡಪಕ್ಷಕ್ಕೂ ತಳಕು ಹಾಕಬೇಡಿ, ಎಡಪಕ್ಷಗಳು ಮೊದಲಿನಿಂದಲೂ ನಕ್ಸಲ್ ಚಟುವಟಿಕೆಯನ್ನು ವಿರೋಧಿಸುತ್ತ ಬಂದಿವೆ ಎಂದರು. |