ಸುಮಾರು 3 ತಿಂಗಳ ಬಳಿಕ ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಸೇರಿದಂತೆ 20ಮಂದಿಯ ವಿರುದ್ಧ ನ್ಯಾಯಾಲಯದಲ್ಲಿ ಅಭಿಯೋಜಕ ಉಜ್ವಲ್ ನಿಕ್ಕಂ ಅವರು ಆರೋಪಪಟ್ಟಿ ಸಲ್ಲಿಸಿದರು.ವಾಣಿಜ್ಯ ನಗರಿಯಾದ ಮುಂಬೈ ಭಯೋತ್ಪಾದನಾ ದಾಳಿ ಕುರಿತಂತೆ ಅಂದಾಜು 10ಸಾವಿರಕ್ಕೂ ಅಧಿಕ ಪುಟಗಳ ಆರೋಪಪಟ್ಟಿಯನ್ನು ಇಂದು ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಎಂ.ಜೆ.ಮಿರ್ಜಾ ಅವರಿಗೆ ಸಲ್ಲಿಸಲಾಯಿತು. ಕಸಬ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲವಾಗಿತ್ತು. ಆದರೆ ಸ್ಥಳೀಯ ಲಷ್ಕರ್ ಇ ತೊಯ್ಬಾದ ಇಬ್ಬರು ಶಂಕಿತರನ್ನು ನ್ಯಾಯಾಲಯಕ್ಕೆ ಕರೆ ತರಲಾಗಿತ್ತು.ಕಸಬ್ ಸೇರಿದಂತೆ ಸುಮಾರು 45ಆರೋಪಿಗಳ ಹೆಸರನ್ನು ಆರೋಪಪಟ್ಟಿಯಲ್ಲಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2,202 ಮಂದಿಯ ಸಾಕ್ಷಿ ಪಡೆಯಲಾಗಿದೆ. 3ಮಂದಿ ಆರೋಪಿಗಳು ಬಂಧನದಲ್ಲಿದ್ದು, 9ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದ 35ಮಂದಿ ವಾಂಟೆಡ್ ಪಟ್ಟಿಯಲ್ಲಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ತಲೆಮರೆಸಿಕೊಂಡಿರುವ ಉಗ್ರರ ವಿರುದ್ಧ ಮುಂಬೈ ಪೊಲೀಸರು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಸುಮಾರು 200ಮಂದಿ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಲಾಗಿದೆ. ಕಸಬ್ ವಿರುದ್ಧ ಕಠಿಣ ಕಾಯ್ದೆ ದಾಖಲಿಸಲಾಗಿದ್ದು, ಅದರಲ್ಲಿ ದೇಶದ್ರೋಹಿ ಹತ್ಯೆ, ಕೊಲೆ ಯತ್ನ ಹಾಗೂ ಭಾರತೀಯ ದಂಡ ಸಂಹಿತೆ ಸೇರಿದಂತೆ ಮೋಕಾ ಕಾಯ್ದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಮುಂಬೈಗೆ ದಾಳಿ ನಡೆಸಲು ಆಗಮಿಸಿದ್ದ ಹತ್ತು ಮಂದಿ ಲಷ್ಕರ್ ಉಗ್ರರಲ್ಲಿ ಕಸಬ್ ಹೊರತುಪಡಿಸಿ ಒಂಬತ್ತು ಮಂದಿ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಮುಂಬೈ ದಾಳಿ ಸಂಚಿನ ಶಂಕಿತ ಮಾಸ್ಟರ್ ಮೈಂಡ್ ಜಾಕಿ ಉರ್ ರೆಹಮಾನ್ ಲಕ್ವಿ ಹಾಗೂ ಯೂಸೂಫ್ ಮುಜಾಮಿಲ್ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದು ಅವರ ಹೆಸರನ್ನು ಜಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿದೆ. |