ನವದೆಹಲಿ: ಸರ್ಕಾರರ ಸೇವಾ ಸೌಲಭ್ಯಗಳನ್ನು ಹಲವರಿಗೆ ವಿಸ್ತರಿಸುವ ಸಲುವಾಗಿ ಲೋಕಸಭೆ `ನೌಕರ' ಎಂಬ ಪದಕ್ಕೆ ಅರ್ಥವಿವರಣೆಯನ್ನು ವಿಶಾಲಗೊಳಿಸಿ ಹೊಸ ವಿಧೇಯಕವನ್ನು ಜಾರಿಗೊಳಿಸಿದೆ.
ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ರಾಜ್ಯ ಸಚಿವ ಆಸ್ಕರ್ ಫೆರ್ನಾಂಡಿಸ್ ಬುಧವಾರ ಗ್ರ್ಯಾಚುಯಿಟಿ ಪಾವತಿ ವಿಧೇಯಕ- 2007ನ್ನು ಹಿಂಪಡೆದು ಅದರ ತಿದ್ದುಪಡಿ ರೂಪ ಗ್ರ್ಯಾಚುಯಿಟಿ ಪಾವತಿ ವಿಧೇಯಕ-2009ನ್ನು ಕಲಾಪದ ವೇಳೆ ಲೋಕಸಭೆಯ ಮುಂದಿಟ್ಟರು.
ಈ ವಿಧೇಯಕದಲ್ಲಿ ನೌಕರ (ಎಂಪ್ಲಾಯಿ) ಪದಕ್ಕೆ ಅರ್ಥವಿವರಣೆಯನ್ನು ಇನ್ನೂ ವಿಶಾಲಗೊಳಿಸಲಾಗಿದೆ. ತರಬೇತಿಗಾಗಿ ಕೆಲಸ ಮಾಡುತ್ತಿರುವವನನ್ನು ಹೊರತುಪಡಿಸಿ ವೇತನಕ್ಕಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯನ್ನು ಆ ಸಂಸ್ಥೆಯ ನೌಕರ ಎನ್ನುವವರೆಗೆ ನೌಕರ ಪದದ ಅರ್ಥವನ್ನು ವಿಸ್ತಾರಗೊಳಿಸಲಾಗಿದೆ. ಇದು ದೈಹಿಕ ಶ್ರಮ ಅಥವಾ ಇನ್ನಾವುದೇ ಕೆಲಸ ಮಾಡುವ ನೌಕರನಿಗೆ ಅನ್ವಯಿಸುತ್ತದೆ ಎಂದು ತಿದ್ದುಪಡಿ ಮಾಡಿದ ನೂತನ ವಿಧೇಯಕದಲ್ಲಿ ಹೇಳಲಾಗಿದೆ.
ಶಿಕ್ಷಕರ ಗ್ರಾಚ್ಯುಯಿಟಿ ಪಾವತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಮೊದಲ ಬಾರಿ ಗ್ರಾಚ್ಯುಯಿಟಿ ವಿಧೇಯಕಕ್ಕೆ 2007ರ ನವೆಂಬರ್ ತಿಂಗಳಲ್ಲಿ ತಿದ್ದುಪಡಿ ತರಲಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ಕಾರ್ಮಿಕರ ಸ್ಥಾಯಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಈಗ ಮತ್ತೆ ಈ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಶಿಫಾರಸ್ಸಿನಂತೆ ಈ ವಿಧೇಯಕ ಶಿಕ್ಷಣ ಸಂಸ್ಥೆಗಳಿಗೆ 1997 ಏಪ್ರಿಲ್ 3ರಿಂದ ಪೂರ್ವಾನ್ವಯವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. |