ಬಿಜೆಪಿ ಹಿರಿಯ ಮುಖಂಡ ಆಡ್ವಾಣಿ ಭೇಟಿಗೆ ನಕಾರ ವ್ಯಕ್ತಪಡಿಸಿ ಮುಖಭಂಗ ಮಾಡಿದ್ದ ಶಿವಸೇನೆಯ ವರಿಷ್ಠ ಬಾಳಾ ಠಾಕ್ರೆ ಮತ್ತೊಂದು ಬಾಂಬ್ ಸಿಡಿಸಿದ್ದು, ಗೋದ್ರಾ ಹತ್ಯಾಕಾಂಡದ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಕುರ್ಚಿಯಿಂದ ಕೆಳಗಿಳಿಸಬಾರದೆಂದು ಆಡ್ವಾಣಿಯವರ ಮನವೊಲಿಸಿರುವುದಾಗಿ ತಿಳಿಸಿದ್ದಾರೆ.ಒಂದು ವೇಳೆ ಮೋದಿಯನ್ನು ಮುಖ್ಯಮಂತ್ರಿಯಿಂದ ಹುದ್ದೆಯಿಂದ ಕೆಳಗಿಳಿಸಿದರೆ, ಗುಜರಾತ್‌ನಲ್ಲಿ ಬಿಜೆಪಿ ನೆಲಕಚ್ಚಲಿದೆ (ಮೋದಿ ಗಯಾ ತೋ ಗುಜರಾತ್ ಗಯಾ) ಎಂಬುದಾಗಿ ಆಡ್ವಾಣಿಯವರಿಗೆ ತಿಳಿಸಿದ್ದೆ ಎಂದು ಠಾಕ್ರೆ ಇಲ್ಲಿನ ಮೇಯರ್ ಬಂಗ್ಲೆಯಲ್ಲಿ ಮಾತನಾಡುತ್ತ ತಿಳಿಸಿರುವುದಾಗಿ ಗಂಭೀರವಾಗಿ ಆರೋಪಿಸಿದ್ದಾರೆ.ಗೋದ್ರಾ ಘಟನೆಯ ನಂತರ ಜಾಗತಿಕವಾಗಿ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಮೋದಿಯನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ನಾನು ಆಡ್ವಾಣಿಯವರಿಗೆ ಸ್ಪಷ್ಟವಾಗಿ ತಿಳಿಸಿದ್ದೆ, ಮೋದಿಯನ್ನು ನೀವು ಕೆಳಗಿಳಿಸಿದರೆ ಬಿಜೆಪಿಗೆ ನಷ್ಟವಾಗಲಿದೆ ಎಂಬುದಾಗಿ ಹೇಳಿರುವುದಾಗಿ ಶಿವಸೇನೆಯ ಮುಖವಾಣಿ ಸಾಮ್ನಾದ ಬುಧವಾರದ ಸಂಪಾದಕೀಯದಲ್ಲಿ ವಿವರಿಸಿದ್ದಾರೆ.ಭಾರತೀಯ ಜನತಾ ಪಕ್ಷ ಹಾಗೂ ಶಿವಸೇನೆ ನಡುವಿನ ಸಂಬಂಧ ಹದಗೆಟ್ಟ ನಂತರ ಠಾಕ್ರೆ ಈ ಆರೋಪ ಹೊರಬಿದ್ದಿರುವುದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. |