ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುತ್ತೇನೆ ಎನ್ನುತ್ತಿರುವುದು ಅದರ 'ಖೊಟ್ಟಿ ಆತ್ಮವಿಶ್ವಾಸ' ಎಂದು ಗಾಂಧಿ ಕುಟುಂಬದ ಮೇಲೆ ಹರಿಹಾಯ್ದಿರುವ ನ್ಯಾಶನಲ್ ಕಾಂಗ್ರೆಸ್ ಪಕ್ಷವು ಈ ಮೂಲಕ ತನ್ನ ಮತ್ತು ಕಾಂಗ್ರೆಸ್ ನಡುವಿನ ತಿಕ್ಕಾಟಕ್ಕೆ ತುಪ್ಪ ಸುರಿದಿದೆ.
"ಕಾಂಗ್ರೆಸ್ ತನ್ನ ಸ್ವಂತ ಬಲದಿಂದ ಯಶಸ್ಸು ಕಾಣಲಿಲ್ಲ. ಅದು ತನ್ನ ಮಿತ್ರ ಪಕ್ಷಗಳ ಸಹಾಯದಿಂದ ಯಶಸ್ಸು ಸಾಧಿಸಿದೆ. ಇದರ ಫಲವಾಗಿ ಅವರು ಎಲ್ಲಾ ಅಧಿಕಾರಗಳು ಏಕವ್ಯಕ್ತಿಯಲ್ಲಿ ಕೇಂದ್ರೀಕೃತವಾಗಿರುವಂತಹ ಇಂದಿರಾ ಗಾಂಧಿ ತರಹದ ನಾಯಕತ್ವವನ್ನು ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಎನ್‌ಸಿಪಿಯ ಮುಖವಾಣಿ ರಾಷ್ಟ್ರವಾದಿಯಲ್ಲಿ 'ಕಾಂಗ್ರೆಸ್‌ನ ನಕಲಿ ಆತ್ಮವಿಶ್ವಾಸ ಹಾಗೂ ಮುಂಬರುವ ಚುನಾವಣೆಗಳು' ಎಂಬ ತಲೆಬರಹದ ಸಂಪಾದಕೀಯದಲ್ಲಿ ಬರೆಯಲಾಗಿದೆ. ಅಲ್ಲದೆ, ಇದರಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ದುರಹಂಕಾರಿಗಳು ಎಂದು ಬಿಂಬಿಸಲಾಗಿದೆ.
"ಶರದ್ ಪವಾರ್ ಅಥವಾ ಲಾಲೂ ಪ್ರಸಾದ್ ಯಾದವ್ ಅವರುಗಳು ಪ್ರಧಾನನಿಯಾಗ ಬೇಕೆಂದು ಬಯಸಿದರೆ ಅದು ಅವರಿಗೆ ಅಧಿಕಾರದ ಹಸಿವು. ಆದರೆ, ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸಿದರೆ, ಆದೂ ರಾಷ್ಟ್ರದ ಹಿತಾಸಕ್ತಿಗಾಗಿ" ಎಂದು ವ್ಯಂಗ್ಯವಾಡಲಾಗಿದೆ.
ರಾಹುಲ್ ಗಾಂಧಿಯಂತಹ ಅನನುಭವಿ ಯುವಕನೊಬ್ಬ ಹಿರಿಯ ನಾಯಕರಿಗೆ ಪಾಠ ಮಾಡುತ್ತಾರೆಂದಾದರೆ ಅದಕ್ಕೆ ಅಹಂಕಾರವೇ ಕಾರಣ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.
ಮುಂದಿನ ಚುನಾವಣೆಯಲ್ಲಿ ಎನ್‌ಸಿಪಿ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೆ, ಸೋನಿಯಾ ಗಾಂಧಿ ನಾಯಕತ್ವದ ಕಾಂಗ್ರೆಸ್ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂದೂ ಬರೆಯಲಾಗಿದೆ. |