ಈ ಸುದ್ದಿಯನ್ನು ಓದುವ ವೇಳೆಗೆ ಛೇ..ಛೇ ನಾನೂ ಅಲ್ಲಿರುತ್ತಿದ್ದರೆ ಎಂದು ಅನಿಸದಿರಲಾರದು. ಇದು ಬುಧವಾರದಂದು ಕೋಲ್ಕತಾದ ಬೀದಿಯಲ್ಲಿ ಅಕ್ಷರಶಃ ಹಣದ ಮಳೆ ಸುರಿದ ಸುದ್ದಿ. ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಇಲ್ಲಿನ ಜವಾಹರ್ ನೆಹರೂ ರಸ್ತೆಯಲ್ಲಿ ಗರಿಗರಿ 500ರ ನೋಟುಗಳ ಕಂತೆಗಳು, ಬಿಡಿಬಿಡಿ ನೋಟುಗಳು ಹಾರಾಡುತ್ತಿದ್ದವು. ಇದು ಅಲ್ಲಿನ ಜನತೆಗೆ ಇದ್ದಕ್ಕಿದ್ದಂತೆ ಒಲಿದ ಅದೃಷ್ಟ ಎಂಬುದಾಗಿ ನೀವು ಹೇಳುವಂತಿಲ್ಲ. ಆದರಿದು ಅಲ್ಲಿನ ಕಂಪೆನಿಯೊಂದಕ್ಕೆ ಒದಗಿದ 'ಸಂಕಟ'. ಇದ್ದಕ್ಕಿದ್ದಂತೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ದುಡ್ಡನ್ನು ಅಡಗಿಸಲು ಬೇರೆ ದಾರಿ ಇಲ್ಲದೆ, ಕಿಟಿಕಿಯಲ್ಲಿ ತೂರಿಬಿಟ್ಟರಂತೆ!
ಉಪಾಯುಕ್ತ ನಿಕೋಲಸ್ ಮುರ್ಮು ನೇತೃತ್ವದ ಆದಾಯ ತೆರಿಗೆ ತಂಡವು ಮೆ| ಸಂದೀಪ್ ಮೇಕ್ ಇಂಜೀನಿಯರಿಂಗ್ ಎಂಬ ಸಂಸ್ಥೆಯ ಮೇಲೆ ಮಧ್ಯಾಹ್ನ ಸುಮಾರು ಒಂದು ಗಂಟೆಗೆ ಮುಂಚಿತವಾಗಿ ಏಕಾಏಕಿ ದಾಳಿ ನಡೆಸಿದರು. ಇದನ್ನು ಕಂಡ ಸಂಸ್ಥೆಯ ಸಿಬ್ಬಂದಿಗಳಿಗೆ ಏನುಮಾಡಬೇಕೆಂದು ತೋಚಲಿಲ್ಲ. ಎವರೆಸ್ಟ್ ಬಿಲ್ಡಿಂಗ್‌ನ 14ನೆ ಮಹಡಿಯಲ್ಲಿ ಸಂಸ್ಥೆಯ ಕಚೇರಿ ಇತ್ತು. ಅದಾಯ ತೆರಿಗೆ ಇಲಾಖಾ ಸಿಬ್ಬಂದಿಯನ್ನು ಕಂಡ ಸಂಸ್ಥೆಯ ಸಿಬ್ಬಂದಿಗಳು ಕಂತೆಕಂತೆ ನೋಟುಗಳನ್ನು ಕಿಟಿಕಿಯಿಂದ ಎಸೆದರು ಎನ್ನಲಾಗಿದೆ.
ಇದನ್ನು ಕಂಡ ನೂರಾರು ಮಂದಿ ಹಣವನ್ನು ಹೆಕ್ಕಲು ಮುಗಿಬಿದ್ದರು. ಕೆಲವು ನೋಟಿನ ಕಂತೆಗಳು ರಸ್ತೆಯಲ್ಲಿ ಬಿದ್ದರೆ ಇನ್ನೂ ಕೆಲವು ಕಂತೆಗಳು ಕಸದ ತೊಟ್ಟಿಗೆ ಬಿದ್ದವು ಎಂಬುದಾಗಿ ಪ್ರತ್ಯಕ್ಷದರ್ಶಿ ಪ್ರಕಾಶ್ ಕುಮಾರ್ ಎಂಬಾತ ಹೇಳಿದ್ದಾರೆ.
ಗುಂಪಿನಲ್ಲಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಸುಮಾರು 3.2 ಲಕ್ಷದಷ್ಟು ಹಣವನ್ನು ಗುಡಿಸಿದ್ದು, ಇದನ್ನು ಬಕೆಟ್‌ನಲ್ಲಿ ಒಟ್ಟು ಮಾಡಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದರು.
ಆದಾಯ ತೆರಿಗೆ ಇಲಾಖಾ ಸಿಬ್ಬಂದಿಗಳು ದಾಖಲೆಗಳನ್ನು ನೋಡುವಲ್ಲಿ ತಲ್ಲೀನರಾಗಿದ್ದಾಗ, ಕಂಪೆನಿಯ ಅಧಿಕಾರಿಗಳು ಈ ನಗದನ್ನು ಮರೆಮಾಚಲು ಹಣವನ್ನು ಎಸೆದಿರಬಹುದು. ಇದನ್ನು ಸಂಗ್ರಹಿಸಲು ಕಂಪೆನಿಯ ಕೆಲವು ಸಿಬ್ಬಂದಿಗಳು ಕೆಳಗಿಳಿದು ಹೋಗುವಷ್ಟರಲ್ಲಿ ಯಾರೋ ಇದನ್ನು ನೋಡಿರಬಹುದು ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಿಸಿದ್ದಾರೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ಕಂಪೆನಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. |