ಮುಂಬೈ ದಾಳಿಯ ಬಳಿಕ ಪಾಕಿಸ್ತಾನದೊಂದಿಗಿನ ಭಾರತದ ನಡವಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನೆರೆಯ ರಾಷ್ಟ್ರಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲೇ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ." ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲೇ ಅದಕ್ಕೆ ಉತ್ತರಿಸದಿದ್ದರೆ, ಈ ರಾಷ್ಟ್ರದಿಂದ ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಸಾಧ್ಯವಿಲ್ಲ ಮತ್ತು ಇದನ್ನು ಮಾಡಲು ಯುಪಿಎ ಸರ್ಕಾರ ಅಸಮರ್ಥವಾಗಿದೆ" ಎಂದು ಮೋದಿ ಇಲ್ಲಿಗೆ ಸಮೀಪದ ಪಿಂಪ್ಲಾಗಾಂವ್ ಎಂಬಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದ್ದಾರೆ."26 /11ರ ಘಟನೆ ಸಂಭವಿಸಲು ಯುಪಿಎ ಸರ್ಕಾರದ ಅಸಾಮರ್ಥ್ಯವೇ ಕಾರಣ, ಸರ್ಕಾರವು ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರದ ಭದ್ರತೆಯೊಂದಿಗೆ ರಾಜಿಮಾಡಿಕೊಂಡಿದೆ" ಎಂಬ ಗಂಭೀರ ಆರೋಪವನ್ನು ಮೋದಿ ಮಾಡಿದರು. ನವೆಂಬರ್ 26ರಂದು ಮುಂಬೈ ಮೇಲೆ ನಡೆದಿರುವ ದಾಳಿಯು ಭಾರತದ ಮೇಲೆ ಸಾರಿರುವ ಯುದ್ಧವಾಗಿದೆ, ಆದರೆ, ನಮ್ಮ ಸರ್ಕಾರವು ಪಾಕಿಸ್ತಾನಕ್ಕೆ ಪತ್ರ ರವಾನಿಸುತ್ತಿದೆ ಮತ್ತು ಪಾಕಿಸ್ತಾನವು 30 ಪ್ರಶ್ನೆಗಳೊಂದಿಗೆ ಉತ್ತರಿಸುವ ಎದೆಗಾರಿಕೆ ತೋರುತ್ತಿದೆ ಎಂದು ಅವರು ನುಡಿದರು." ಆ ಪ್ರಶ್ನೆಗಳನ್ನು ನನಗೆ ನೀಡಿ ಮತ್ತು ಇವುಗಳಿಗೆ ಹೇಗೆ ಉತ್ತರಿಸಬೇಕು ಎಂದು ನಾನು ಸರ್ಕಾರಕ್ಕೆ ಹೇಳಿಕೊಡುತ್ತೇನೆ" ಎಂದು ಮೋದಿ ಸರ್ಕಾರಕ್ಕೆ ಸವಾಲು ಹಾಕಿದರು.ಪ್ರಧಾನಿ ಮನಮೋಹನ್ ಸಿಂಗ್ ಅವರ ಸಾಮರ್ಥ್ಯವನ್ನು ಪ್ರಶ್ನಿಸಿದ ಗುಜರಾತ್ ಮುಖ್ಯಮಂತ್ರಿ, ರಾಷ್ಟ್ರದ ಯಾವುದೇ ಒಬ್ಬ ಕಾಂಗ್ರೆಸಿಗ ಮನಮೋಹನ್ ಸಿಂಗ್ ತಮ್ಮ ನಾಯಕ ಎಂದು ಹೇಳುತ್ತಿಲ್ಲ. ರಾಷ್ಟ್ರದ ಪ್ರಧಾನಿಯೊಬ್ಬರನ್ನು ಅವರದ್ದೇ ಪಕ್ಷವು ನಾಯಕನೆಂದು ಒಪ್ಪದಿರುವಂತಹ ಪರಿಸ್ಥಿತಿಯನ್ನು ನೀವೆಲ್ಲಿಯಾದರೂ ನೋಡಿದ್ದೀರಾ, ಹೀಗಿರುವಾಗ ಅವರು ರಾಷ್ಟ್ರವನ್ನು ಹೇಗೆ ಮುನ್ನಡೆಸುತ್ತಾರೆ? ಎಂದು ಪ್ರಶ್ನಿಸಿದರು. |