ವಾಣಿಜ್ಯ ನಗರಿ ಭಯೋತ್ಪಾದನಾ ದಾಳಿ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ ಸೇರಿದಂತೆ 20ಮಂದಿಯ ವಿರುದ್ಧ ಬುಧವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಇದೀಗ 26/11ರ ಸಂಚಿನ ಹಿಂದೆ ಭೂಗತದೊರೆ ದಾವೂದ್ ಇಬ್ರಾಹಿಂ ಕೈವಾಡ ಇರುವುದಾಗಿ ಶಂಕಿಸಲಾಗಿದೆ.
ನಿನ್ನೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಸುಮಾರು 11ಸಾವಿರಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ, ತನಿಖಾಧಿಕಾರಿಗಳಿಗೆ ದೊರೆತ 5ಸಿಮ್ ಕಾರ್ಡ್‌ಗಳಲ್ಲಿ 3ರ ದೂರವಾಣಿ ಸಂಖ್ಯೆಯನ್ನು ಪತ್ತೆ ಹಚ್ಚಿದ್ದು, ಅದು ಕರಾಚಿಯಲ್ಲಿನ ದಾವೂದ್ ಠಿಕಾಣಿ ಹೂಡಿರುವ ಕ್ಲಿಪ್ಟನ್ ಪ್ರದೇಶಕ್ಕೆ ಸಂದೇಶ ರವಾನಿಸಿದ್ದಾಗಿದೆ ಎಂಬ ಅಂಶ ಬಯಲಾಗಿದೆ.
ಕರಾಚಿಯ ಕ್ಲಿಪ್ಟನ್ ಪ್ರದೇಶ ದಾವೂದ್ ನಿವಾಸ ಇದ್ದು, 3ಸಿಮ್ ಕಾರ್ಡ್ ಟ್ರೇಸ್ ಮಾಡಿದ್ದು, ಉಗ್ರರು ಆ ಪ್ರದೇಶಕ್ಕೆ ಸಂದೇಶ ರವಾನಿಸಿರುವುದು ಖಚಿವಾಗಿರುವ ಹಿನ್ನೆಲೆಯಲ್ಲಿ ಮುಂಬೈ ದಾಳಿಯ ಹಿಂದೆ ದಾವೂದ್ ಕೈವಾಡ ಇರುವ ಬಗ್ಗೆ ಗುಪ್ತಚರ ಇಲಾಖೆಯ ಮೂಲಗಳು ಬಲವಾದ ಶಂಕೆ ವ್ಯಕ್ತಪಡಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾದ ವರದಿ ವಿವರಿಸಿದೆ.
ಕಳೆದ ವರ್ಷ ನವೆಂಬರ್ 26ರಂದು ಮುಂಬೈ ಭಯೋತ್ಪಾದನಾ ದಾಳಿಯ ಸತತ 58ಗಂಟೆಗಳ ಕಾಲದ ಸಮಯದಲ್ಲಿ ಭಯೋತ್ಪಾದಕರು 995 ನಿಮಿಷಗಳಲ್ಲಿ 284ಕರೆಗಳನ್ನು ಮಾಡಿದ್ದರು. ದಾಳಿಯ ಸಂದರ್ಭದಲ್ಲಿ ಉಗ್ರರು ತಾಜ್ ಮಹಲ್ ಹೋಟೆಲ್, ಒಬೇರಾಯ್ ಟ್ರೈಡೆಂಟ್ ಮತ್ತು ನಾರಿಮನ್ ಹೌಸ್‌ಗಳಿಂದ ಮೊಬೈಲ್ ಪೋನ್ ಮೂಲಕ ಪಾಕಿಸ್ತಾನದಲ್ಲಿರುವ ಉಗ್ರರೊಂದಿಗೆ ಮಾತುಕತೆ ನಡೆಸಿದ್ದರು.
ವಾಣಿಜ್ಯ ನಗರಿ ಮೇಲಿನ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿಂದಲೇ ಕುಳಿತ 'ಮಾಸ್ಟರ್ ಮೈಂಡ್' ಉಗ್ರರು ಮೊಬೈಲ್ ಪೋನ್ ಮುಖೇನ ಸಂದೇಶ-ಸಲಹೆ ನೀಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಅಲ್ಲದೇ 3ಸಿಮ್ ಕಾರ್ಡ್ ಟ್ರೇಸ್ ಮಾಡಿದ್ದು ಅದು 'ಡಿ' ಕಂಪೆನಿಯ ದೊರೆ ದಾವೂದ್‌ನ ಕ್ಲಿಪ್ಟನ್ ಪ್ರದೇಶ ಎಂಬುದನ್ನು ಪತ್ತೆ ಹಚ್ಚಲಾಗಿದೆ. |