ಮುಖ್ಯನ್ಯಾಯಾಧೀಶರಿಗೆ ಇತರ ನ್ಯಾಯಾಧೀಶರು ತಮ್ಮ ಆಸ್ತಿಗಳ ವಿವರಣೆ ನೀಡುವುದು ವೈಯಕ್ತಿಕ ಮಾಹಿತಿಯಾಗಿದ್ದು, ಇದನ್ನು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಬಹಿರಂಗಪಡಿಸಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ದೆಹಲಿ ಹೈಕೋರ್ಟಿನ ಮುಂದೆ ಮಾಡಿಕೊಂಡಿರುವ ಅರಿಕೆಯಲ್ಲಿ ತನ್ನ ನ್ಯಾಯಾಧೀಶರುಗಳು ತಮ್ಮ ಆಸ್ತಿ ಬಹಿರಂಗ ಪಡಿಸುವಿಕೆಯನ್ನು ವಿರೋಧಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆಯಾದರೂ, ಹೀಗೆ ಮಾಡಲು ಕಾನೂನೀ ಬದ್ಧತೆ ಇಲ್ಲ ಎಂದು ಹೇಳಿದೆ.
ಕೇಳಿರುವಂತಹ ಮಾಹಿತಿ(ನ್ಯಾಯಾಧೀಶರ ಆಸ್ತಿ ವಿವರಣೆ)ಯು ನಿಚ್ಚಳವಾಗಿಯೂ ವೈಯಕ್ತಿಕ ಮಾಹಿತಿಯಾಗಿದ್ದು, ಇದರ ಬಹಿರಂಗಪಡಿಸುವಿಕೆಗೂ ಇತರ ಯಾವುದೇ ಸಾರ್ವಜನಿಕ ಚಟುವಟಿಕೆಗಳಿಗೂ ಸಂಬಂಧವಿಲ್ಲ ಎಂದು ಸಪ್ರೀಂ ಕೋರ್ಟ್ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಹೇಳಲಾಗಿದೆ.
"ಯಾವುದೇ ಕಾನೂನಿನ ನಿಬಂಧನೆಗೊಳಪಟ್ಟ ಸಾರ್ವಜನಿಕ ಪ್ರಾಧಿಕಾರವು ಹೊಂದಿರುವ ಮಾಹಿತಿಯನ್ನು ಮಾಹಿತಿ ಹಕ್ಕಿನ ಪ್ರಕಾರ ಹೊಂದಬಹುದಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಘೋಷಣೆಗಾಗಿ ಯಾವುದೇ ಕಾನೂನೀ ಅಥವಾ ಸಾಂವಿಧಾನಿಕ ಅವಶ್ಯಕತೆ ಇರುವುದಿಲ್ಲ, ಯಾವುದೇ ಘೋಷಣೆಯನ್ನು ಸಲ್ಲಿಸಲಾಗಿದ್ದರೂ ಇದು ಪ್ರಸಕ್ತ ಕಾಯ್ದೆಯಡಿ ಬರುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಲಾಗಿರುವ ಎಲ್ಲ ಮಾಹಿತಿಯು ಸಾರ್ವಜನಿಕ ವ್ಯಾಪ್ತಿಗೆ ಬರುವ ಕಾರಣ ಇಂತಹ ಮಾಹಿತಿಯ ಬಹಿರಂಗ ಪಡಿಸುವಿಕೆಯನ್ನು ತಿರಸ್ಕರಿಸಲಾಗದು ಎಂಬುದಾಗಿ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಸಲ್ಲಿಸಲಾಗಿರುವ ಅರ್ಜಿದಾರನಿಗೆ ಸಪ್ರೀಂಕೋರ್ಟ್ ಏಳು ಪುಟಗಳ ಅಫಿದಾವಿತ್ ಮೂಲಕ ಉತ್ತರ ನೀಡಿದೆ. |