ಮುಂಬೈದಾಳಿ ತನಿಖೆಗೆ ಸಂಬಂಧಿಸಿದ ಪಾಕಿಸ್ತಾನದ ಪ್ರಶ್ನೆಗಳಿಗೆ ಭಾರತವು ಉತ್ತರಿಸಲು ಸಾಧ್ಯವಾದಾಗ ಉತ್ತರಿಸಲಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ." ಪಾಕಿಸ್ತಾನದೊಂದಿಗೆ ಇದನ್ನು ಹಂಚಿಕೊಳ್ಳುವ ಪರಿಸ್ಥಿತಿಯಲ್ಲಿ ನಾವು ಯಾವಾಗ ಇರುತ್ತೇವೆಯೋ ಆ ವೇಳೆಗೆ ನಾವು ಉತ್ತರಿಸಲಿದ್ದೇವೆ" ಎಂಬುದಾಗಿ ಅವರು ವರದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದ್ದಾರೆ.ಪ್ರಶ್ನೆಗಳಿಗೆ ಉತ್ತರಿಸಲು ಯಾವುದೇ ಸಮಯ ಮಿತಿಯನ್ನು ಪ್ರಸ್ತಾಪಿಸದ ಅವರು, ಮುಂಬೈ ದಾಳಿಗೆ ಸಂಬಂಧಿಸಿದಂತೆ ನೀಡಲಾಗಿರುವ ದಾಖಲೆಗಳ ಬಗ್ಗೆ ಪಾಕಿಸ್ತಾನವು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಭಾರತವು ಪಾಕಿಸ್ತಾನಕ್ಕೆ ಬದ್ಧತೆಯನ್ನು ಸೂಚಿಸಿದೆ ಎಂದು ಪ್ರಣಬ್ ಈ ಸಂದರ್ಭದಲ್ಲಿ ನುಡಿದರು." ದಾಖಲೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೋರಿ ಪ್ರಶ್ನೆಗಳನ್ನು ಸ್ವೀಕರಿಸಿದಾಗ, ಭಾರತ ಸರ್ಕಾರವು ಇದಕ್ಕೆ ಉತ್ತರಿಸುವ ಬದ್ಧತೆಯನ್ನು ಸೂಚಿಸಿದೆ ಮತ್ತು ಯಾವಾಗ ಸಾಧ್ಯವೋ ಆ ವೇಳೆಗೆ ನಾವು ಸ್ಪಷ್ಟನೆಯನ್ನು ನೀಡಲಿದ್ದೇವೆ" ಎಂದು ಪಾನ್-ಆಫ್ರಿಕನ್ ಇ- ನೆಟ್ವರ್ಟ್ ಯೋಜನೆಯನ್ನು ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ ಬಳಿಕ ಭಾರತವು ಪಾಕಿಸ್ತಾನಕ್ಕೆ ಉತ್ತರ ನೀಡಲಿದೆ ಎಂದು ಗೃಹಸಚಿವ ಪಿ.ಚಿದಂಬರಂ ಈ ಹಿಂದೆ ಹೇಳಿದ್ದರು.ತನ್ನ ನೆಲವನ್ನು ಭಯೋತ್ಪಾದಕರು ಬಳಸಿಕೊಳ್ಳಲು ಬಿಡುವುದಿಲ್ಲ ಎಂಬ ದ್ವೀಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಬದ್ಧತೆಗಳನ್ನು ಪಾಕಿಸ್ತಾನವು ಸಂಪೂರ್ಣಗೊಳಿಸಬೇಕು ಎಂಬುದಾಗಿ ಮುಖರ್ಜಿ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು. |