ಅಹಮದಾಬಾದ್ ನಗರಪಾಲಿಕೆಯು ಶುಕ್ರವಾರ ಮುಂಜಾನೆ ಖಾಸಗಿ ವೈದ್ಯರ ಕ್ಲಿನಿಕ್‌ಗಳಿಗೆ ದಾಳಿ ನಡೆಸಿ 10 ಸಾವಿರ ಕೆ.ಜಿಗಿಂತಲೂ ಹೆಚ್ಚು ಬಳಸಿದ ಸಿರಿಂಜ್‌ಗಳನ್ನು ಶಪಡಿಸಿಕೊಂಡಿದೆಯಲ್ಲದೆ, 15 ಕ್ಲಿನಿಕ್‌ಗಳಿಗೆ ಬೀಗ ಮುದ್ರೆಹಾಕಿದೆ.
ಹದಿನೈದು ವೈದ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಪ್ರಕಾರ ಅಹಮದಾಬಾದ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಯಾವುದೇ ವೈದ್ಯರನ್ನು ಬಂಧಿಸಲಾಗಿಲ್ಲ. ತನಿಖೆಯ ಬಳಿಕ ವೈದ್ಯರನ್ನು ಬಂಧಿಸಬಹುದೆಂದು ಹೇಳಲಾಗಿದೆ.
ಇದಲ್ಲದೆ, ಜಿಲ್ಲಾ ಆರೋಗ್ಯಾಧಿಕಾರಿಗಳು ಗುಜುರಿ ವ್ಯಾಪಾರಿಗಳ ಗೋಡಾನುಗಳಿಗೆ ದಾಳಿ ನಡೆಸಿದ್ದು, ದೊಡ್ಡ ಮೊತ್ತದ ಸಿರಿಂಜ್ ಹೊಂದಿದ್ದ ಐದು ಗೋಡಾನುಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿ ಬೃಹತ್ ಮೊತ್ತದ ಬಳಸಿದ ಸಿರಿಂಜ್‌ಗಳು, ಸೂಜಿಗಳು ಮತ್ತು ಬಯೋ ಮೆಡಿಕಲ್ ತ್ಯಾಜ್ಯಗಳು ಪತ್ತೆಯಾಗಿವೆ.
ಹೆಪಟೈಟಿಸ್ ಪೀಡಿತ ಮಡೋಸಾ ಪಟ್ಟಣದಿಂದ ಈ ಗುಜುರಿ ವ್ಯಾಪಾರಿಗಳು ಸಿರಿಂಜ್‌ಗಳು ಮತ್ತು ಬಯೋಮೆಡಿಕಲ್ ತ್ಯಾಜ್ಯಗಳನ್ನು ಖರೀದಿಸಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಯ್ಜಿಪುರ ಬೋಗಾ ಪ್ರದೇಶದ ಮೂರು ಗೋಡಾನ್‌ಗಳು ಹಾಗೂ ಅಸವರ ಪ್ರದೇಶದ ಇನ್ನೆರಡು ಗೋಡಾನುಗಳಿಗೆ ಬೀಗಮುದ್ರೆ ಹಾಕಲಾಗಿದೆ ಎಂದು ಜಿಲ್ಲಾ ಮುಖ್ಯವೈದ್ಯಾಧಿಕಾರಿ ಆರ್.ಆರ್. ವೈದ್ಯ ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ನಗರಪಾಲಿಕಾ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. |