ಕೊಲೆ ಆರೋಪಿಯೊಬ್ಬನಿಂದ ಪೊಲೀಸ್ ಠಾಣೆಯಲ್ಲಿ ಹಿಂಸಾಚಾರ ತಪ್ಪಿಸಲು ಪೊಲೀಸ್ ಅಧಿಕಾರಿಗಳಿಬ್ಬರು ಪಡೆದ 30 ಸಾವಿರ ರೂಪಾಯಿ ಲಂಚವನ್ನು ಬಡ್ಡಿ ಸಮೇತ ಕಕ್ಕಬೇಕು ಎಂದು ನ್ಯಾಯಾಲಯ ಒಂದು ತೀರ್ಪು ನೀಡಿರುವ ಅಪರೂಪದ ಪ್ರಕರಣ ವರದಿಯಾಗಿದೆ.
ಪೊಲೀಸ್ ಅಧಿಕಾರಿಗಳಾದ ಗುಲ್ಶನ್ ರೈ ಮತ್ತು ರಾವ್ ರಾಮ್‌ಕುಮಾರ್ ಎಂಬಿಬ್ಬರು ಮುಖೇಶ್ ಎಂಬ ಆರೋಪಿಯಿಂದ ಪಡೆದಿರುವ 30 ಸಾವಿರ ರೂಪಾಯಿಯನ್ನು ಶೇ.9ರ ಬಡ್ಡಿ ಸಹಿತ ಮರಳಿಸ ಬೇಕು ಎಂಬುದಾಗಿ ಸೋನೆಪತ್ ನ್ಯಾಯಾಲಯ ತೀರ್ಪು ನೀಡಿದೆ.
ಕೋಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದ ಮುಖೇಶ್ ಎಂಬಾತನನ್ನು ಸೋನೆಪತ್ ನಗರ ಪೊಲೀಸರು 1998ರ ಫೆಬ್ರವರಿ 16ರಂದು ಬಂಧಿಸಿದ್ದರು. ಮೂರು ದಿನಗಳ ಕಾಲದ ಬಂಧನದ ವೇಳೆ ತನಗೆ ಹಿಂಸೆ ನೀಡದಿರುವಂತೆ ಪೊಲೀಸಧಿಕಾರಿಗಳಾದ ರೈ ಮತ್ತು ರಾವ್ ಅವರುಗಳಿಗೆ 30 ಸಾವಿರ ರೂಪಾಯಿ ನೀಡಲು ಮುಂದಾಗಿದ್ದ. "ಆದರೆ ಲಂಚ ಪಡೆದ ಬಳಿಕವೂ ತನ್ನ ಮೇಲೆ ತೃತೀಯದರ್ಜೆ ಪ್ರಯೋಗ ಮಾಡಲಾಯಿತು" ಎಂದು ಮುಖೇಶ್ ತಾನು ಸಲ್ಲಿಸಿದ ಮೊಕದ್ದಮೆಯಲ್ಲಿ ಹೇಳಿದ್ದರು. ಪ್ರಕರಣದಿಂದ ಖುಲಾಸೆಯಾದ ತಕ್ಷಣ ಮುಖೇಶ್ 1998ರ ಮಾರ್ಚ್ 23ರಂದು ಸಿವಿಲ್ ಕೋರ್ಟಿನಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಜಡ್ಜ್(ಸೀನಿಯರ್ ಡಿವಿಜನ್) ಆರ್.ಪಿ.ಗೋಯಲ್ ಅವರು ರೈ ಮತ್ತು ರಾವ್ ಪಡೆದ ಲಂಚದ ಹಣವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ನಿರ್ದೇಶನ ನೀಡಿದರು. ಅಲ್ಲದೆ ಇವರ ವಿರುದ್ಧ ಕ್ರಿಮಿಲ್ ಪ್ರಕ್ರಿಯೆ ಮುಂದುವರಿಸುವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ರೈ ಸೇವೆಯಿಂದ ನಿವೃತ್ತಿಯಾಗಿದ್ದರೆ, ರಾವ್ ಇದೀಗಾಗಲೆ ಸಾವನಪ್ಪನ್ನಪ್ಪಿದ್ದರೂ ಇದೊಂದು ಅಪರೂಪದ ಪ್ರಕರಣ ಎಂದು ನ್ಯಾಯಾಲಯ ಹೇಳಿದೆ. |