ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಈ ನಾಲ್ಕೂವರೆ ವರ್ಷಗಳು ಅಸಂತುಷ್ಟವಾಗಿದ್ದವು ಎಂಬುದಾಗಿ ಚಟರ್ಜಿಯವರು ಹೇಳಿದರಾದರೂ, ತಾನು 'ಸಂತೃಪ್ತಿಯಿಂದ' ತೆರಳುತ್ತಿರುವುದಾಗಿ ಅವರು ಈ ಸಂದರ್ಭದಲ್ಲಿ ನುಡಿದರು.ಸಿಪಿಎಂ ಜತೆಗಿನ ವೈರುಧ್ಯದ ಕುರಿತು ಮಾತನಾಡಿದ ಅವರು, ತನಗೆ ಪಕ್ಷವನ್ನು ಎದುರು ಹಾಕಿಕೊಳ್ಳುವ ಉದ್ದೇಶವಿರಲಿಲ್ಲ ಎಂದು ನುಡಿದರು. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗದಿರುವುದಕ್ಕೆ ಅವರು ತಮ್ಮ ಅಸಮಾಧಾನವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.ಗುರುವಾರ ಹದಿನಾಲ್ಕನೆ ಲೋಕಸಭೆಯ ಕೊನೆಯ ದಿನವಾಗಿತ್ತು. ಗುರುವಾರದಂದು ಅವರು ಲೋಕಸಭೆಯಲ್ಲಿನ ತನ್ನ ಸ್ಪೀಕರ್ ಅಧಿಕಾರದ ಅನುಭವಗಳನ್ನು ಮೆಲುಕುಹಾಕಿದರು. ಅಶಿಸ್ತಿನಿಂದ ವರ್ತಿಸುವ ಸಂಸದರನ್ನು ಮುಲಾಜಿಲ್ಲದೆ ಗದರುತ್ತಿದ್ದ ಚಟರ್ಜಿ ಇದಕ್ಕಾಗಿ ಮನೆಮಾತಾಗಿದ್ದರು. ಅವರು ಲೋಕಸಭೆಯಲ್ಲಿ ತನ್ನ ಉತ್ತಮ ಮತ್ತು ಕೆಟ್ಟ ಅನುಭವಗಳನ್ನು ಸ್ಮರಿಸಿಕೊಂಡರು. ತನ್ನ ಪುತ್ರಿಯೊಂದಿಗೆ ಅವರು ತನ್ನ 39 ವರ್ಷಗಳ ಸುದೀರ್ಘವಾದ ಸಂಸತ್ತಿನ ಒಡನಾಟಕ್ಕೆ ವಿದಾಯ ಹೇಳಿದರು.ವೈಯಕ್ತಿಕವಾಗಿ ತನಗೆ ಇದೊಂದು ಅಪೂರ್ವ ಅವಕಾಶವಾಗಿತ್ತು ಎಂಬುದಾಗಿ ಚಟರ್ಜಿ ಗುರುವಾರ ಹೇಳಿದ್ದರು. ತನ್ನ ಪಕ್ಷವು ಆಡಳಿತಾರೂಢ ಯುಪಿಎ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಾಗ ಸ್ಥಾನ ತ್ಯಜಿಸಲು ನಿರಾಕರಿಸಿರುವ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟನೆಗೊಂಡ ಪ್ರಥಮ ಸ್ಪೀಕರ್ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ.ಕಳೆದ ಜುಲೈ ತಿಂಗಳ 22ನೆ ತಾರೀಕಿನಂದು ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ವಿಶ್ವಾಸ ಮತಯಾಚನೆ ಮಾಡಿದ್ದ ವೇಳೆ ಸದನದಲ್ಲಿ ನೋಟಿನ ಪ್ರದರ್ಶನ ಮಾಡಿದ್ದು ತನ್ನ ಸೇವಾವಧಿಯಲ್ಲೇ ಅತ್ಯಂತ ದುಃಖಕರ ದಿನ ಎಂದು ಅವರು ಹೇಳಿದ್ದರು.ತನ್ನ ನಿವೃತ್ತಿ ಅವಧಿಯಲ್ಲಿ ಕುಟುಂಬದೊಂದಿಗೆ ಕಾಲಕಳೆಯಲು ಇಚ್ಛಿಸಿರುವ ಚಟರ್ಜಿ, ಕುಟುಂಬ ತನ್ನ ಬೆಂಬಲಕ್ಕಿದೆ ಎಂದು ಹೇಳಿದ್ದಾರೆ. |