ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯಾಗಿ 'ಆನೆ'ಯ ಚಿತ್ರವನ್ನು ನೀಡಬಾರದು ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಜಾಗರಣಾ ಮಂಚ್ ಹಾಗೂ ಇತರ ಹಿಂದೂ ಸಂಘಟನೆಗಳು ಇದನ್ನು ಹಿಂತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿವೆ.
ಹಿಂದೂ ಜಾಗರಣಾ ಮಂಚ್‌ನ ಅವಧ್ ಪ್ರಾಂತ್ಯದ ಅಧ್ಯಕ್ಷ ಓಂಪ್ರಕಾಶ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಈ ಕುರಿತು ಇದೀಗಾಗಲೇ ವಿನಂತಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ.
"ಆನೆಯನ್ನು ಹಿಂದೂಗಳು ಭಗವಾನ್ ಗಣೇಶನ ರೂಪದಲ್ಲಿ ಆರಾಧಿಸುತ್ತಾರೆ. ರಾಜಕೀಯ ಪಕ್ಷಗಳು ತಮ್ಮ ಘೋಷಣೆಗೆ ಮತ್ತು ಪ್ರಚಾರಕ್ಕಾಗಿ ಬಳಸುವ ಕಾರಣ ಇದರಿಂದ ದೇವರಿಗೆ ಅವಮಾನಿಸಿದಂತಾಗುತ್ತದೆ ಮತ್ತು ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.
ಅಲ್ಲದೆ, ಇದು ಮಾದರಿ ನೀತಿಸಂಹಿತೆಯ ಉಲ್ಲಂಘನೆಯೂ ಆಗಿದ್ದು, ಇದನ್ನು ತಕ್ಷಣ ನಿಷೇಧಿಸಬೇಕು ಎಂದು ಮಿಶ್ರಾ ನುಡಿದರು.
ತಮ್ಮ ಬೇಡಿಕೆ ತಕ್ಷಣ ಈಡೇರದೇ ಇದ್ದರೆ, ಸಂತರು, ಧರ್ಮಾಚಾರ್ಯರುಗಳು ಮತ್ತು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಚುನಾವಣಾ ಆಯೋಗದ ಎದುರು ಧರಣಿ ನಡೆಸಲಿದ್ದಾರೆ ಮತ್ತು ಸಂಸತ್ತಿನ ಎದುರು 'ಮಹಾಪಂಚಾಯತ್' ನಡೆಸಲಿದ್ದಾರೆ ಎಂದು ಮಿಶ್ರಾ ತಿಳಿಸಿದ್ದಾರೆ. |