ಮುಂಬೈ ದಾಳಿ ನಡೆಸಿರುವ ಪಾತಕಿಗಳು ಸಮುದ್ರಮಾರ್ಗ ಮೂಲಕ ಮುಂಬೈ ತಲುಪಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂಬ ಪಾಕಿಸ್ತಾನ ನೌಕಾಪಡೆಯ ಹೇಳಿಕೆಯನ್ನು ಭಾರತವು ಶುಕ್ರವಾರ ತಳ್ಳಿಹಾಕಿದೆ.ಮುಂಬೈ ದಾಳಿ ಕುರಿತ ಪಾಕಿಸ್ತಾನದ ತಿಪ್ಪರಲಾಗವನ್ನು ಗೃಹಸಚಿವ ಪಿ.ಚಿದಂಬರಂ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ಪಾಕಿಸ್ತಾನದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ನೋಮನ್ ಬಶೀರ್ ಅವರು, ಅಜ್ಮಲ್ ಅಮೀರ್ ಕಸಬ್ ಹಾಗೂ ಮುಂಬೈ ದಾಳಿನಡೆಸಿದ ಇತರ ಒಂಬತ್ತು ಉಗ್ರರು ಸಮುದ್ರಮಾರ್ಗ ಬಳಸಿಲ್ಲ ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಚಿದಂಬರಂ "ನಾಳೆ ಯಾರಾದರೊಬ್ಬರು ಬಶೀರ್ ಹೇಳಿಕೆಯನ್ನು ಅಲ್ಲಗಳೆಯುತ್ತಾರೆ ಎಂಬುದು ಖಚಿತ" ಎಂದು ನುಡಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಭಾರತೀಯ ನೌಕಾಪಡೆಯ ಪಹರೆಯ ವೈಫಲ್ಯದಿಂದಾಗಿ ಮುಂಬೈ ದಾಳಿ ನಡೆದಿದೆ ಎಂಬ ಬಶೀರ್ ಹೇಳಿಕೆಗೆ ಪ್ರತಿಕ್ರಿಯೆ ಬಯಸಿದ ವೇಳೆ, "ಪಾಕಿಸ್ತಾನ ನೌಕಾಪಡೆಯಿಂದ ತನಗೆ ಸರ್ಟಿಫಿಕೇಟ್ ಅಥವಾ ಹೊಗಳಿಕೆಯ ಅಗತ್ಯವಿಲ್ಲ" ಎಂದು ತಿರುಗೇಟು ನೀಡಿದರು.ಮುಂಬೈದಾಳಿಯ ಕುರಿತು ಪಾಕಿಸ್ತಾನಕ್ಕೆ ಸಲ್ಲಿಸಲಾಗಿರುವ ದಾಖಲೆ ಪತ್ರಗಳ ಕುರಿತು ಪಾಕಿಸ್ತಾನ ಎತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ಭಾರತ ಸರ್ಕಾರ ರೂಪಿಸುತ್ತಿದೆ ಎಂದು ನುಡಿದ ಗೃಹಸಚಿವರು, ಹೆಚ್ಚಿನ ಉತ್ತರಗಳು ಮುಂಬೈ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿವೆ ಎಂದು ನುಡಿದರು. |