ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನಾ ಮೂಲಸೌಕರ್ಯವನ್ನು ಸಂಪೂರ್ಣ ತೊಡೆದು ಹಾಕುವ ತನಕ ಆ ರಾಷ್ಟ್ರಕ್ಕೆ ನೀಡುವ ಸಹಾಯವನ್ನು ಎಲ್ಲಾ ರಾಷ್ಟ್ರಗಳು ಸ್ಥಗಿತಗೊಳಿಸಬೇಕು ಎಂಬುದಾಗಿ ಭಾರತ ಹೇಳಿದೆ. ಪಾಕಿಸ್ತಾನಕ್ಕೆ ಸೇನಾ ಸಹಾಯವನ್ನು ಹೆಚ್ಚಿಸುವುದಾಗಿ ಅಮೆರಿಕ ಪ್ರಸ್ತಾಪಿಸಿರುವ ಮಾರನೆ ದಿನವೇ ಭಾರತದ ಈ ಹೇಳಿಕೆ ಹೊರಬಿದ್ದಿದೆ.
ಭಯೋತ್ಪಾದನಾ ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಪ್ರಾತ್ಯಕ್ಷಿಕ ಮಾದರಿಯಲ್ಲಿ ನೆಲಸಮಮಾಡುವ ತನಕ ಯಾವುದೇ ರಾಷ್ಟ್ರವು ಪಾಕಿಸ್ತಾನಕ್ಕೆ ಸೇನಾ ಸಹಾಯ ನೀಡಬಾರದು ಎಂಬುದಾಗಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ. ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡುತ್ತಿದ್ದರು.
ಪಾಕಿಸ್ತಾನದ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರು ಈ ಪ್ರಾಂತ್ಯಕ್ಕೆ ಮಾತ್ರವಲ್ಲ ಇಡಿಯ ವಿಶ್ವಕ್ಕೇ ಅಪಾಯಕಾರಿಗಳು ಎಂದು ಅವರು ನುಡಿದರು. ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಕೇಳಿರುವ ಪ್ರಶ್ನೆಗಳಿಗೆ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶರ್ಮಾ, ಸರ್ಕಾರವು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ನುಡಿದರು.
ಪಾಕಿಸ್ತಾನವು ಎತ್ತಿರುವ ಪ್ರಶ್ನೆಗಳಿಗೆ ಭಾರತೀಯ ಭದ್ರತಾ ಸಂಸ್ಥೆಗಳು ಎಲ್ಲಾ ಕಾನೂನಿ ಅಂಶಗಳನ್ನು ಗಮನಿಸುತ್ತಿವೆ ಎಂದೂ ಅವರು ತಿಳಿಸಿದರು.
ಮುಂಬೈಯಲ್ಲಿ ನಡೆಸಲಾಗಿರುವ ಉಗ್ರವಾದಿ ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯನ್ನು ಪಾಕಿಸ್ತಾನವು ಒಪ್ಪಿಕೊಂಡರೆ, ಅದು ಇಸ್ಲಾಮಾಬಾದಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಎಂದು ಸಚಿವ ಶರ್ಮಾ ನುಡಿದರು. |