ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ, ಸಣ್ಣ ರೈತರಿಗಾಗಿ ಅದು ಕೃಷಿ ಆದಾಯ ಗ್ಯಾರಂಟಿ ಯೋಜನೆಯನ್ನು ಆರಂಭಿಸಲಿದೆಯಲ್ಲದೆ, ವಯೋವೃದ್ಧ ರೈತರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಇಲ್ಲಿ 'ವಿಜಯ ಸಂಕಲ್ಪ' ರ‌್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಕೃಷಿ ಆದಾಯ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ನುಡಿದರು.
ಸರ್ಕಾರಿ ಉದ್ಯೋಗಿಗಳು ನಿವೃತ್ತಿ ವೇತನವನ್ನು ಪಡೆಯುತ್ತಾರೆಂದಾದರೆ, ವಯೋವೃದ್ಧ ಕೃಷಿಕರು ಯಾಕೆ ನಿವೃತ್ತಿ ವೇತನ ಪಡೆಯಬಾರದು ಎಂಬುದಾಗಿ ಅವರು ಪ್ರಶ್ನಿಸಿದರು.
ಉತ್ತಮ ಆಡಳಿತ, ಜನಸಾಮಾನ್ಯನಿಗೆ ಭದ್ರತೆ ಮತ್ತು ಎಲ್ಲಾ ರಂಗಗಳ ಅಭಿವೃದ್ಧಿ ಮುಂತಾದ ಧ್ಯೇಯೋದ್ದೇಶಗಳೊಂದಿಗೆ ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಲಿದೆ ಎಂದವರು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಹಾಗೂ ನದಿ ಜೋಡಣೆ ಯೋಜನೆಯನ್ನು ತ್ಯಜಿಸಿರುವುದಕ್ಕೆ ಯುಪಿಎ ಸರ್ಕಾರವನ್ನು ದೂರಿದ ಅವರು, "ಎನ್‌ಡಿಎ ಈ ಎಲ್ಲ ಉಪಕ್ರಮಗಳನ್ನು ಎನ್‌ಡಿಎ ಮತ್ತೆ ಆರಂಭಿಸಲಿದೆ ಹಾಗೂ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲಿದೆ. ಮತ್ತು ಈ ಯೋಜನೆಗಳಿಗೆ ಹಣ ವಿನಿಯೋಗಿಸುವ ಮೂಲಕ ಆರ್ಥಿಕ ಹಿಂಸರಿತವನ್ನು ತಡೆಯಲು ಸಹಾಯವಾಗುತ್ತದೆ" ಎಂದು ಅವರು ನುಡಿದರು.
ಭಾರತೀಯ ಉದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ, 'ಅತ್ಯಂತ ಕೆಟ್ಟದ್ದು ಇನ್ನಷ್ಟೆ ಬರಬೇಕಿದೆ' ಎಂದು ಹೇಳಿದ್ದನ್ನು ನೆನಪಿಸಿಕೊಂಡ ಬಿಜಿಪಿ ನಾಯಕ, "ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಸುಮಾರು ಒಂದೂವರೆ ಕೋಟಿ ಉದ್ಯೋಗಗಳು ನಷ್ಟವಾಗಲಿದೆ, ಇದನ್ನು ಈ ಸರ್ಕಾರ ಸರಿದೂಗಿಸಲಿದೆಯೇ? ಇಲ್ಲ ಅವರಿಂದ ಸಾಧ್ಯವಿಲ್ಲ" ಎಂದು ನುಡಿದರು. |