ಮುಂಬೈ ದಾಳಿಕೋರರು ಸಮುದ್ರ ಮಾರ್ಗ ಬಳಸಿಲ್ಲ ಎಂಬ ಪಾಕಿಸ್ತಾನದ ಹೊಸ ರಾಗವನ್ನು ಅಲ್ಲಗಳೆದಿರುವ ಭಾರತ, ಉಗ್ರರು ಸಮುದ್ರ ಮಾರ್ಗ ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಹೇಳಿದೆ.
ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು "ನವೆಂಬರ್ 26ರ ಘಟನೆಯ ಬಳಿಕ ನಮ್ಮ ತನಿಖಾ ಸಂಸ್ಥೆಗಳು ಸಂಪೂರ್ಣ ತನಿಖೆ ನಡೆಸಿದ್ದು, ದಾಳಿಕೋರರು ಸಮುದ್ರಮಾರ್ಗ ಬಳಸಿ ಬಂದಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗಿದೆ" ಎಂದು ನುಡಿದರು.
ಇದೇ ಸಮಾರಂಭದಲ್ಲಿ ಭಾಗವಹಿಸಿದ್ದ, ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುರೇಶ್ ಮೆಹ್ತಾ ಅವರೂ ಆಂಟನಿ ಅವರ ಮಾತನ್ನು ಪುನರುಚ್ಚರಿಸಿದರು. ತನಿಖಾ ಸಂಸ್ಥೆಗಳು ಸಮರ್ಥವಾಗಿವೆ ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಹಾಗೂ ಈ ಸಂಸ್ಥೆಗಳು ಉಗ್ರರು ಸಮುದ್ರಮಾರ್ಗ ಬಳಸಿರುವುದಕ್ಕೆ ಸೂಕ್ತವಾದ ದಾಖಲೆಗಳನ್ನು ಒದಗಿಸಿವೆ ಎಂದು ಮೆಹ್ತಾ ನುಡಿದರು.
ದಾಳಿಯ ವೇಳೆ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸಮುದ್ರ ಮಾರ್ಗ ಮೂಲಕ ಭಾರತಕ್ಕೆ ತೆರಳಿಲ್ಲ ಎಂಬುದಾಗಿ ಪಾಕಿಸ್ತಾನ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ನೋಮನ್ ಬಶೀರ್ ನೀಡಿರುವ ಹೇಳಿಕೆಗೆ ಈ ಇಬ್ಬರು ಪ್ರತಿಕ್ರಿಯಿಸಿದ್ದಾರೆ. |