ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ನಿರ್ಮಲಾ ವೆಂಕಟೇಶ್ ಅವರನ್ನು ವಜಾ ಮಾಡಿರುವ ಕ್ರಮವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಸಮರ್ಥಿಸಿಕೊಂಡಿದ್ದಾರೆ.
ನಿರ್ಮಲಾ ಅವರು ಆಯೋಗದ ಆದೇಶವನ್ನು ಉಲ್ಲಂಘನೆ ಮಾಡಿದ್ದರಿಂದ ಅವರನ್ನು ವಜಾ ಮಾಡಬೇಕಾಯಿತು ಎಂದು ರೇಣುಕಾ ಹೇಳಿದ್ದಾರೆ. ದಾಳಿ ಕುರಿತು ನಿರ್ಮಲಾ ವೆಂಕಟೇಶ್ ಅವರು ನೀಡಿದ್ದ ವರದಿಯನ್ನು ತಿರಸ್ಕರಿಸಿದ ನಂತರ ಅವರನ್ನು ವಜಾಗೊಳಿಸುವ ತೀರ್ಮಾನವನ್ನು ವಿವೇಚನೆಯಿಂದ ಕೈಗೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ನಂತರ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ನಿರ್ಮಲಾ ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಲ್ಲದೇ ಪಬ್‌ನಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದೇ ರೀತಿ ರಾಜ್ಯ ಸರಕಾರಕ್ಕೆ ಹೊಗಳಿಕೆಯ ಸರ್ಟಿಪಿಕೇಟ್ ಕೊಟ್ಟಿದ್ದರು.
ನಿರ್ಮಲಾ ಅವರು ದಾಳಿ ಬಗ್ಗೆ ಮೃದು ಧೋರಣೆ ತಾಳಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆ ನಿರ್ಮಲಾ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ನಡುವೆಯೂ ಜಟಾಪಟಿ ನಡೆದಿತ್ತು. |