ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಲಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಸಮರ್ಥ ಅಭ್ಯರ್ಥಿಯೇನಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕಿ ಸುಷ್ಮಾಸ್ವರಾಜ್ ಅವರು ತಿಳಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಸ್ವರಾಜ್, ದತ್ ವಿರುದ್ಧ ಸ್ಪರ್ಧಿಸಲಿರುವ ಲಾಲ್‌ಜಿ ಟಂಡನ್ ಅವರು ಒಬ್ಬ ಸಮರ್ಥ ರಾಜಕಾರಣಿ ಮತ್ತು ದತ್ ಅವರು ಒಬ್ಬ ಅಸಮರ್ಥ ಅಭ್ಯರ್ಥಿ ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಲಕ್ನೋ ಕ್ಷೇತ್ರಕ್ಕೆ ಪಕ್ಷ ಲಾಲ್‌ಜಿ ಅವರನ್ನು ಆಯ್ಕೆ ಮಾಡಿದೆ ಎಂದು ಸ್ವರಾಜ್ ಹೇಳಿದರು. ವಾಜಪೇಯಿ ಅವರು ಐದು ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗುಜರಾತ್, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕೇಂದ್ರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸ್ವರಾಜ್ ಹೇಳಿದರು. |