ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂಬ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಎನ್.ಗೋಪಾಲಸ್ವಾಮಿ ಅವರು ಮಾಡಿದ್ದ ಶಿಫಾರಸ್ಸನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾನುವಾರ ತಿರಸ್ಕರಿಸಿದ್ದಾರೆ.ಒಂದು ಪಕ್ಷದ(ಕಾಂಗ್ರೆಸ್) ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂಬ ಆರೋಪದ ಮೇರೆಗೆ ಚುನಾವಣಾ ಆಯುಕ್ತ ಚಾವ್ಲಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಜನವರಿ ತಿಂಗಳಿನಲ್ಲಿ ಸಿಇಸಿ ಗೋಪಾಲಸ್ವಾಮಿ ಅವರು ಸ್ವಯಂಪ್ರೇರಿತ ಶಿಫಾರಸನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದರು. ಗೋಪಾಲಸ್ವಾಮಿ ಅವರ ಈ ನಿರ್ಧಾರ ರಾಜಕೀಯ ವಲಯದಲ್ಲಿ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತಲ್ಲದೆ, ಕೇಂದ್ರ ಕಾನೂನು ಸಚಿವ ಭಾರದ್ವಾಜ್ ಕೂಡ ಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡಿದ್ದರು.ಮುಖ್ಯಚುನಾವಣಾ ಆಯುಕ್ತರು ನೀಡಿರುವ ವರದಿಯನ್ನು ಸರಕಾರ ಶಿಫಾರಸು ಮಾಡಿತ್ತು, ಅದರೆ ನವೀನ್ ಚಾವ್ಲಾ ಅವರನ್ನು ಸೇವೆಯಿಂದ ವಜಾ ಮಾಡಬೇಕೆಂಬ ನಿರ್ಧಾರವನ್ನು ರಾಷ್ಟ್ರಪತಿಗಳು ಸಾರಸಗಟಾಗಿ ತಿರಸ್ಕರಿಸಿದ್ದಾರೆ.ಈ ಗೊಂದಲಕ್ಕೂ ಮುನ್ನ ಚಾವ್ಲಾ ಅವರು ಕಾಂಗ್ರೆಸ್ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ್ದ ಬಿಜೆಪಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಮನವಿ ಸಲ್ಲಿಸಿತ್ತು. ಬಳಿಕ ಆ ಮನವಿಯನ್ನು ಪ್ರಧಾನಿಯವರಿಗೆ ರವಾನಿಸಲಾಗಿತ್ತು. ಅದೇ ಪ್ರತಿಯನ್ನು ಮುಖ್ಯಚುನಾವಣಾ ಆಯುಕ್ತರಿಗೂ ಕಳುಹಿಸಿತ್ತು.ಆದರೆ ಸುಪ್ರೀಂಕೋರ್ಟ್‌ನ ಆದೇಶದಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಸ್ವಯಂಪ್ರೇರಿತವಾಗಿ ವಜಾಗೊಳಿಸುವ ಶಿಫಾರಸು ಮಾಡುವ ಅಧಿಕಾರ ಇಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿತ್ತು. |