ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ಎ ತೋಯ್ಬಾ 26/11 ಭಯೋತ್ಪಾದಕ ಸಂಚನ್ನು ವ್ಯವಸ್ಥಿತವಾಗಿ ಕಾರ್ಯಗತ ಮಾಡಲು ಮುಂಬೈನ ಐಷಾರಾಮಿ ಕೊಲಾಬಾದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ತನ್ನ ಕಾರ್ಯಾಚರಣೆ ನೆಲೆಯನ್ನು ಸ್ಥಾಪಿಸಲು ಯೋಜಿಸಿದ್ದ ವಿಷಯ ಕಸಬ್ ವಿರುದ್ಧ ಸಲ್ಲಿಸಿದ್ದ 11ಸಾವಿರ ಪುಟಗಳ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ.
ಆದರೆ ಕೆಲವು ಕಾರಣಗಳಿಂದ ಈ ಯೋಜನೆ ಫಲಪ್ರದವಾಗದೇ ದಕ್ಷಿಣ ಮುಂಬೈನ ನಾಗಪಾದದ ಬಟಾಟವಾಲಾ ಚಾಲ್‌ನ ರೂಂ.ನಂ.14ರಲ್ಲಿ ಅಂತಿಮವಾಗಿ ನೆಲೆ ಸ್ಥಾಪಿಸಿತೆಂದು ವರದಿಯಲ್ಲಿ ವಿವರಿಸಲಾಗಿದೆ.
ಕೊಲಾಬಾದ ಬದ್ವಾರ್ ಪಾರ್ಕ್ ಬಹುಮಹಡಿಯ ವಸತಿ ಸಂಕೀರ್ಣವಾಗಿದ್ದು, ಭಾರತೀಯ ರೈಲ್ವೆಯ ಉನ್ನತಾಧಿಕಾರಿಗಳ ವಸತಿ ಹೊಂದಿದೆ. ತನ್ನ ಪಿತೂರಿಯ ಇಡೀ ಯೋಜನೆಗೆ ಗುರಿಯಿರಿಸಿದ ಸ್ಥಳಗಳಿಗೆ ಬದ್ವಾರ್ ಪಾರ್ಕ್ ನಿರ್ಣಾಯಕವಾಗಿತ್ತೆಂದು ಹೇಳಲಾಗಿದೆ. ಬದ್ವಾರ್ ಪಾರ್ಕ್ ಎದುರಿಗಿರುವ ಮಚ್ಚಿಮಾರ್(ಮೀನುಗಾರರ) ಕಾಲೊನಿಯನ್ನು ತನ್ನ ಇಳಿದಾಣದ ನೆಲೆಯಾಗಿ ಭಯೋತ್ಪಾದಕರು ಆರಿಸಿಕೊಂಡು ಐದು ಗುಂಪುಗಳಾಗಿ ಆಯಾ ಸ್ಥಳಗಳಿಗೆ ಚೆದುರಿದ ಸತ್ಯಾಂಶದಿಂದ ಇದು ರುಜುವಾತಾಗಿದೆ.
11ಸಾವಿರಕ್ಕೂ ಅಧಿಕ ಪುಟಗಳ ಮುಂಬೈ ಪೊಲೀಸರ ಆರೋಪಪಟ್ಟಿಯಲ್ಲಿ ಎಲ್‌ಇಟಿಯ ಭಯೋತ್ಪಾದನೆ ಯೋಜನೆ ಅದರ ಮುಖ್ಯಸ್ಥ ಹಫೀಜ್ ಸಯ್ಯದ್ ಮತ್ತು ಕಾರ್ಯಾಚರಣೆ ಮುಖ್ಯಸ್ಥ ಜಾಕಿವುರ್ ರೆಹ್ಮಾನ್ ಲಖ್ವಿಯ ಪೂರ್ವನಿಯೋಜಿತ ಕಾರ್ಯತಂತ್ರದ ಕಡೆ ಬೆಟ್ಟು ಮಾಡುತ್ತದೆಂದು ಸಹಾಯಕ ಪೊಲೀಸ್ ಆಯುಕ್ತ ಎ.ಟಿ.ದುರಾಫೆಪೆ ತಿಳಿಸಿದ್ದಾರೆ. 2007ರ ಮಧ್ಯಾವಧಿಯಲ್ಲಿ ಈ ಪಿತೂರಿಯನ್ನು ರೂಪಿಸಿರುವ ಸಾಧ್ಯತೆಯಿದ್ದು, 2008, ನ.26ರಲ್ಲಿ ಅಂತಿಮವಾಗಿ ಅನುಷ್ಠಾನಗೊಳಿಸಲಾಯಿತೆಂದು ಹೇಳಲಾಗಿದೆ. |