ಪಾಕಿಸ್ತಾನ ಜೈಲಿನಲ್ಲಿ ಕೊಳೆಯುತ್ತಿರುವ ಸರಬ್‌ಜಿತ್ ಸಿಂಗ್ ಸೇರಿದಂತೆ ಉಳಿದ 13ಜನರ ಬಿಡುಗಡೆ ಸಂಬಂಧ ಸರಕಾರದ ನಿಲುವೇನು ಎಂಬ ಬಗ್ಗೆ ವಿವರಣೆ ಕೋರಿ ದೆಹಲಿ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಗುಪ್ತಚಾರದ ಆರೋಪದಲ್ಲಿ ಸರಬ್‌ಜಿತ್ ಸಿಂಗ್ ಒಂದು ದಶಕಗಳಿಂದ ಪಾಕ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವು ಭಾರತೀಯರು ಬಹಳಷ್ಟು ಕಾಲದಿಂದ ಪಾಕ್ ಜೈಲುಗಳಲಿದ್ದಾರೆ. ಅವರ ಬಿಡುಗಡೆ ಬಗ್ಗೆ ಭಾರತ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಹಾಗೂ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದೆ ಎಂದು ದೂರಿ ಗುಜರಾತ್ ಮೂಲದ ಮಾನವ ಹಕ್ಕುಗಳ ಹೋರಾಟ ಸಂಘಟನೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ಸಂಘಟನೆ ಪರವಾಗಿ ವಕೀಲ ಕಿಶೋರ್ ಪಾಲ್ ನ್ಯಾಯಾಲಯದಲ್ಲಿ ವಾದಿಸಿದ್ದರು.ಈ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಪೀಠದ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ವಿದೇಶಾಂಗ ಸಚಿವಾಲಯಕ್ಕೆ ಈ ಸಂಬಂಧ ಸ್ಪಷ್ಟನೆ ಕೋರಿ ನೋಟಿಸ್ ಜಾರಿ ಮಾಡಿದೆ.ಈ ಸಂದರ್ಭದಲ್ಲಿ ನ್ಯಾಯಾಲಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರತಿಕ್ರಿಯೆಯನ್ನು ಕೋರಿದೆ. ಪಾಕ್ ಜೈಲಿನಲ್ಲಿರುವ ಭಾರತೀಯರ ಬಿಡುಗಡೆಗೆ ಆಯೋಗ ಸರಕಾರವನ್ನು ಈ ಹಿಂದೆ ಒತ್ತಾಯಿಸಿತ್ತು. |