ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಫರ್ಧಿಸಲು ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷವು ಮೈತ್ರಿ ಮಾಡಿಕೊಂಡಿರುವುದಾಗಿ ಈ ಪಕ್ಷಗಳು ಭಾನುವಾರ ರಾತ್ರಿ ಘೋಷಿಸಿವೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಪ್ರಣಬ್ ಮುಖರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು 70 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಮೈತ್ರಿಯ ನಿರ್ಧಾರ ಕೈಗೊಳ್ಳಲಾಯಿತು.
ಕೋಲ್ಕತಾದ ದಕ್ಷಿಣ ಭಾಗದಲ್ಲಿರುವ ಅಥಿತಿ ಗೃಹ ಒಂದರಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕೆ. ಕೇಶವ ರಾವ್ ಅವರೂ ಭಾಗವಹಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ, ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿರುವ ಅಲ್ಲಿನ ಆಡಳಿತಾರೂಢ ಕಮ್ಯುನಿಸ್ಟ್ ನೇತೃತ್ವದ ಎಡರಂಗಕ್ಕೆ ಸೂಕ್ತ ಸವಾಲು ಹಾಕಬಹುದು ಎಂಬುದು ಕಾಂಗ್ರೆಸ್ ಯೋಜನೆಯಾಗಿದೆ.
ಮಮತಾ ಸ್ಫರ್ಧಿಸುವ ದಕ್ಷಿಣ ಕೋಲ್ಕತಾ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ಈಗಾಗಲೇ ನಿರ್ಧರಿಸಿದೆ. |