ನ್ಯಾಯಮೂರ್ತಿ ಗುರುಬಕ್ಸ್ ರಾಜ್ ಮಜಿತಿಯಾ ಅವರನ್ನು, ಕಾರ್ಯನಿರತ ಪತ್ರಕರ್ತರು ಮತ್ತು ಇತರ ಪತ್ರಿಕಾ ಸಿಬ್ಬಂದಿಗಳ ರಾಷ್ಟ್ರೀಯ ವೇತನಾ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ಕೇಂದ್ರ ಸರ್ಕಾರ ನೇಮಿಸಿದೆ.
ನ್ಯಾಯಮೂರ್ತಿ ಕೆ. ನಾರಾಯಣ್ ಕುರುಪ್ ಅರ ಸ್ಥಾನಕ್ಕೆ ಮಜಿತಿಯಾ ಅವರನ್ನು ನೇಮಿಸಲಾಗಿದೆ. ಕುರುಪ್ ಅವರು ಕಳೆದ ಜುಲೈ30ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ವೇತನ ಮಂಡಳಿಗಳು ಪತ್ರಿಕಾ ನೌಕರರಿಗೆ ಶೇ.30ರಷ್ಟು ಮಧ್ಯಂತರ ಪರಿಹಾರ ಶಿಫಾರಸ್ಸು ಮಾಡಿದ ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಾಂಬೆ ಹೈ ಕೋರ್ಟಿನ ನಿವೃತ್ತ ನ್ಯಾಯಾಧೀಶರಾಗಿರುವ ಮಜಿತಿಯಾ ಅವರು ಸಿವಿಲ್, ಕಂಪೆನಿ, ಸಂವಿಧಾನ ಹಾಗೂ ಚುನಾವಣಾ ವಿಚಾರಗಳಲ್ಲಿ ವಿಸ್ತೃತ ಅನುಭವ ಹೊಂದಿದ್ದಾರೆ.
ಪತ್ರಕರ್ತರು ಹಾಗೂ ಇತರ ಪತ್ರಿಕಾ ನೌಕರರಿಗಾಗಿ ವೇತನ ಮಂಡಳಿಯನ್ನು 2007ರ ಮೇ ತಿಂಗಳಲ್ಲಿ ಸರ್ಕಾರಿ ಅಧಿಸೂಚನೆ ಮುಖಾಂತರ ನ್ಯಾಯಮೂರ್ತಿ ಕುರುಪ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದೆ.
ವೇತನ ಮಂಡಳಿಯು ತನ್ನ ವರದಿ ಸಲ್ಲಿಸಲು ಅದರ ಸ್ಥಾಪನಾ ದಿನಾಂಕದಿಂದ 36 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಕುರುಪ್ ಅವರ ರಾಜೀನಾಮೆ ಬಳಿಕ ಸ್ಥಾನವು ಖಾಲಿಯಾಗಿತ್ತು. |