ಸ್ಲಂ ಡಾಗ್ ಮಿಲಿಯನೇರ್ ಚಿತ್ರದಿಂದ ಸಂಪಾದನೆಯಾದ ಹಣವನ್ನು ಮುಂಬೈಯ ಕೊಳಗೇರಿ ಮಕ್ಕಳ ಸಹಾಯಕ್ಕಾಗಿ ಬಳಸಲಾಗುವುದು ಎಂಬುದಾಗಿ ಆಸ್ಕರ್ ವಿಜೇತ ನಿರ್ದೇಶಕ ಡೇನ್ ಬೊಯ್ಲೆ ಹೇಳಿದ್ದಾರೆ.
ಬಾಲನಟ ಅಜರುದ್ದೀನ್‌ನ ತಂದೆ ನಿರ್ದೇಶಕನಿಂದ ಇನ್ನಷ್ಟು ಹಣ ಕೇಳಿರುವ ಬಳಿಕ ಬೋಯ್ಲೆ ಅವರ ಈ ಹೇಳಿಕೆ ಹೊರಬಿದ್ದಿದೆ ಎಂಬುದಾಗಿ ಡೇಲಿ ಮಿರರ್ ವರದಿಮಾಡಿದೆ.
"ಅವರಿಗೆ ನೀಡಿದ ಹಣ ಮಾಯವಾಗಿದೆ. ಹಾಗಾಗಿ ನಾವು ವಿದ್ಯಾಭ್ಯಾಸ ಯೋಜನೆಯೊಂದನ್ನು ಹಮ್ಮಿಕೊಳ್ಳಲಿದ್ದೇವೆ. ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ನಂತರದ ಪಾವತಿ ಪಡೆಯಲಿದ್ದಾರೆ ಮತ್ತು ಅವರಿಗೆ ಮನೆ ಖರೀದಿಗೂ ನಾವು ಹಣ ನೀಡಿದ್ದೇವೆ" ಎಂದು ಬೋಯ್ಲ್ ಅವರು ತನ್ನ ಹುಟ್ಟೂರಿಗೆ ಮರಳಿದ ಬಳಿಕ ಹೇಳಿದ್ದಾರೆ.
ಸ್ಲಂ ಡಾಗ್ ಮಿಲಿಯನೇರ್ ಚಿತ್ರ ಅಂತಾರಾಷ್ಟ್ರೀಯವಾಗಿ ಭಾರೀ ಗೆಲುವು ಸಾಧಿಸಿದ್ದರೂ, ಮಕ್ಕಳು ಇನ್ನೂ ಕೊಳಗೇರಿಯಲ್ಲೇ ಬದುಕುತ್ತಿದ್ದಾರೆ ಎಂಬುದಾಗಿ ವರದಿಗಳು ಪ್ರಕಟವಾದ ಬಳಿಕ ಬೋಯ್ಲೆ ಹಾಗೂ ಚಿತ್ರ ನಿರ್ಮಾಪಕರು ತೀವ್ರ ಟೀಕೆಗೆ ಗುರಿಯಾಗಿದ್ದರು.
ಆದರೆ ಈ ಮಕ್ಕಳಿಗೆ ಲಾಸ್ ಏಂಜಲೀಸ್‌ಗೆ ಪ್ರವಾಸ ಯೋಜಿಸುವ ಮೂಲಕ ಇಂತಹ ಟೀಕೆಗಳಿಗೆ ನಿರ್ಮಾಪಕರು ಸೂಕ್ತ ಉತ್ತರ ನೀಡಿದ್ದರು. ಇದಲ್ಲದೆ, ಈ ಮಕ್ಕಳಿಗೆ ಮನೆಗಳನ್ನು ಖರೀದಿ ಮಾಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ. |