ದಲಿತ ನಾಯಕ ಅಂಬೇಡ್ಕರ್ ಅವರ ವೈಫಲ್ಯಕ್ಕೆ ಕಾಂಗ್ರೆಸ್ ಕಾರಣ ಎಂಬ ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ.ಆಡ್ವಾಣಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್, ಇಂತಹ ಹೇಳಿಕೆಯು 'ರಾಜಕೀಯ ಇತಿಹಾಸದ ಕುರಿತ ಸಂಪೂರ್ಣ ಅಜ್ಞಾನದ ಹೇಳಿಕೆ' ಎಂದು ಟೀಕಿಸಿದೆ.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದರು. ಅವರು ಸಂವಿಧಾನದ ಕರಡು ಪ್ರತಿ ತಯಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು" ಎಂಬುದಾಗಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ವರದಿಗಾರರೊಂದಿಗೆ ಮಾತನಾಡುತ್ತಾ ನೆನಪಿಸಿಕೊಂಡರು.
ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ ಎಂಬ ಆಡ್ವಾಣಿ ಹೇಳಿಕೆಯು ರಾಜಕೀಯ ಇತಿಹಾಸದ ಅಜ್ಞಾನದಿಂದಾಗಿ ನೀಡಿರುವ ಹೇಳಿಕೆ ಎಂದು ಸಿಂಘ್ವಿ ಟೀಕಿಸಿದ್ದಾರೆ.
ಆಗಿನ ಕಾಲದಲ್ಲಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಇದ್ದಿರಬಹುದು, ಆದರೆ ಕಾಂಗ್ರೆಸ್ ಅಂಬೇಡ್ಕರ್ ವಿರೋಧಿ ಎಂಬ ಹೇಳಿಕೆಯು ಇತಿಹಾಸವನ್ನು ಮರೆತು ನೀಡಿರುವಂತಹ ಹೇಳಿಕೆ ಎಂದು ಅವರು ಹೇಳಿದ್ದಾರೆ.
"ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ಅವರು ಬರೆದಿರುವ 'ವರ್ಶಿಪ್ಪಿಂಗ್ ಫಾಲ್ಸ್ ಗಾಡ್ಸ್' ಎಂಬ ಪುಸ್ತಕದಲ್ಲಿ, ಪುಸ್ತಕ ತುಂಬ ಅಂಬೇಡ್ಕರ್ ವಿರೋಧಿ ಹೇಳಿಕೆಗಳಿವೆ. ಅಂಬೇಡ್ಕರ್ ಸ್ವಾತಂತ್ರ್ಯ ವಿರೋಧಿಯಾಗಿದ್ದರು ಮತ್ತು ದಲಿತರಿಗೆ ಪ್ರತ್ಯೇಕ ಮತದಾನದ ಷರತ್ತುಬದ್ಧವಾದ ಸ್ವಾತಂತ್ರ್ಯವನ್ನು ಅವರು ಬಯಸಿದ್ದರು ಎಂಬುದಾಗಿ ಬರೆಯಲಾಗಿದೆ. ಶೌರಿ ಅವರ ಈ ಹೇಳಿಕೆಗೆ ಆಡ್ವಾಣಿ ಮತ್ತು ಬಿಜೆಪಿ ಸ್ಪಷ್ಟನೆ ಕೇಳಿದೆಯೇ" ಎಂಬುದಾಗಿ ಕಾಂಗ್ರೆಸ್ ವಕ್ತಾರ ಈ ಸಂದರ್ಭದಲ್ಲಿ ಪ್ರಶ್ನಿಸಿದರು.
"ರಾಜಕೀಯ ಉದ್ದೇಶಗಳಿಗಾಗಿ ಜನರು ಮೊಸಳೆ ಕಣ್ಣೀರು ಸುರಿಸುತ್ತಾರೆ. ಇವರದ್ದು ಆಶಾಢಭೂತಿತನ. ದಲಿತರು ಚುನಾವಣೆಗೆ ಬಳಸುವ ವಸ್ತುಗಳಲ್ಲ. ಅವರು ಈ ರಾಷ್ಟ್ರದ ಗೌರವಾನ್ವಿತ ಪ್ರಜೆಗಳು" ಎಂದವರು ನುಡಿದರು. |