ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದ ಬಳಿ ಶ್ರೀಲಂಕಾ ಆಟಗಾರರ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಗೃಹಸಚಿವ ಪಿ. ಚಿದಂಬರಂ, ಆಟಗಾರರಿಗೆ ನೀಡಲಾಗಿದ್ದ ಭದ್ರತೆಯು 'ಎಣಿಕೆಗೆಮೀರಿ ಅಸಮರ್ಪಕವಾಗಿತ್ತು' ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, 'ಇದೊಂದು ಆಘಾತಕಾರಿ' ಘಟನೆ ಎಂಬುದಾಗಿ ಲಂಕಾ ಕ್ರಿಕೆಟಿಗರ ಮೇಲಿನ ದಾಳಿಯನ್ನು ಬಣ್ಣಿಸಿದ್ದಾರೆ. ಪಂದ್ಯವಾಡಲು ಗಡ್ಡಾಫಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆ ಮಾರ್ಗದಲ್ಲಿ ಲಿಬರ್ಟಿ ಮಾರ್ಕೆಟ್ ಕ್ರಾಸಿಂಗ್ ಬಳಿ ಲಂಕಾ ಆಟಗಾರರು ತೆರಳುತ್ತಿದ್ದ ಬಸ್ಸಿನ ಮೇಲೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದ ಬಂದೂಕುಧಾರಿಗಳು ದಾಳಿ ನಡೆಸಿದ್ದು, ಆರು ಕ್ರಿಕೆಟಿಗರು ಗಾಯಗೊಂಡಿದ್ದಾರೆ.
"ಈ ಗುಂಡು ಹಾರಾಟವನ್ನು ನಾವು ಖಂಡಿಸುತ್ತೇವೆ. ಲಂಕಾ ಆಟಗಾರರಿಗೆ ನೀಡಿರುವ ಭದ್ರತೆ ಅಸಮರ್ಪಕವಾಗಿದೆ, ಗಾಯಾಳುಗಳಿಗೆ ನಮ್ಮ ಸಂತಾಪವಿದೆ. ಅವರು ತಕ್ಷಣ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ" ಎಂದು ಚಿದಂಬರಂ ಪ್ರತಿಕ್ರಿಯಿಸಿದ್ದಾರೆ. |