ತನ್ನ ಪತ್ನಿ ಹಾಗೂ ಐದರ ಹರೆಯದ ಪುತ್ರಿಯನ್ನು ಕೊಂದಿರುವ ಆರೋಪ ಸಾಬೀತಾಗಿರುವ ವ್ಯಕ್ತಿಯೊಬ್ಬನಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಒಂದು ಮರಣದಂಡನೆ ಶಿಕ್ಷೆ ವಿಧಿಸಿದೆ.
ರಾಮ್ ಸಮುಜ್ ಯಾದವ್ ಎಂಬಾತನ ವಿರುದ್ಧ ಈ ಶಿಕ್ಷೆ ಘೋಷಿಸಿರುವ ಹೆಚ್ಚುವರಿ ಸತ್ರ ನ್ಯಾಯಾಧೀಶ ಶ್ಯಾಮ್‌ಲಾಲ್ ಯಾದವ್ ಅವರು ಈ ಪ್ರಕರಣವು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವರ್ಗೀಕರಿಸಿದ್ದಾರೆ.
ಇದಲ್ಲದೆ, ಆರೋಪಿಗೆ ನ್ಯಾಯಾಲಯ ಏಳು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ. ಆದರೆ ಈ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಯಾದವ್‌ನ ತಂದೆ ರಾಮ್‌ನಾಥ್ ಯಾದವ್, ಸಹೋದರಿ ಬಚ್ನಾ ದೇವಿ ಹಾಗೂ ಭಾವ ದೂಧ್ನಾಥ್ ಯಾದವ್ ಅಲಿಯಾಸ್ ಕಲ್ಲು ಅವರುಗಳನ್ನು ಖುಲಾಸೆಗೊಳಿಸಿದೆ.
ಅಲಹಾಬಾದ್ ಜಿಲ್ಲೆಯ ಕರ್ನಾಜ್‌ಪುರ ಗ್ರಾಮದ ರಾಮ್‌ಗೆ ಊರ್ಮಿಳಾ ಎಂಬಾಕೆಯೊಡನೆ 2000ನೆ ಇಸವಿಯಲ್ಲಿ ವಿವಾಹವಾಗಿತ್ತು. ಊರ್ಮಿಳಾ ಸಾಕಷ್ಟು ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಈಕೆಯನ್ನು ತನ್ನ ಕುಟುಂಬದೊಂದಿಗೆ ಈತ ಶೋಷಿಸುತ್ತಿದ್ದ ಎಂದು ಸರಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಊರ್ಮಿಳಾ 2001ರಲ್ಲಿ ಹೆಣ್ಣುಮಗು ಒಂದಕ್ಕೆ ಜನ್ಮ ನೀಡಿದ್ದಳು. 2006ರ ಸೆಪ್ಟೆಂಬರ್ 10ರಂದು ರಾಮ್ ತನ್ನ ಪತ್ನಿಯೊಂದಿಗೆ ಜಗಳವಾಡಿದ್ದ. ಸಿಟ್ಟಿನಲ್ಲಿ ಈತ ತನ್ನ ಪತ್ನಿ ಹಾಗೂ ಮಗುವನ್ನು ಕತ್ತುಹಿಚುಕಿ ಸಾಯಿಸಿ ಪಕ್ಕದಲ್ಲಿನ ಕೊಳ ಒಂದಕ್ಕೆ ಎಸೆದಿದ್ದ. ಬಳಿಕ ಊರ್ಮಿಳಾ ಕುಟುಂಬದವರಿಗೆ ಹಾಗೂ ಪೊಲೀಸರಿಗೆ ಊರ್ಮಿಳಾ ತನ್ನ ಮಗುವಿನೊಂದಿಗೆ ಆಕಸ್ಮಿಕವಾಗಿ ಕಾಲುಜಾರಿ ಕೊಳಕ್ಕೆ ಬಿದ್ದಿದ್ದಾಳೆ ಎಂದು ರಾಮ್ ಮತ್ತು ಆತನ ಕುಟುಂಬಿಕರು ತಿಳಿಸಿದ್ದರು.
ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಈಕೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿತ್ತು. ಈ ಹಿನ್ನೆಲೆಯಲ್ಲಿ 2006ರ ಸೆಪ್ಟೆಂಬರ್ 14ರಂದು ರಾಮ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಮತ್ತು ವರದಕ್ಷಿಣೆ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. |