ಲಾಹೋರಿನ ಗಡ್ಡಾಫಿ ಕ್ರೀಡಾಂಗಣದ ಸಮೀಪ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿರುವ ಉಗ್ರವಾದಿ ದಾಳಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಉಗ್ರರ ನೆಲೆಗಳನ್ನು ಪುಡಿಗಟ್ಟಿ ಎಂದು ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.
ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇಂತಹ ದಾಳಿಗಳು ಮುಂದುವರಿಯಲಿದೆ ಎಂಬ ಅಂಶವನ್ನು ಅಂತಾರಾಷ್ಟ್ರೀಯ ಸಮುದಾಯಗಳು ಅರಿತುಕೊಳ್ಳಬೇಕು ಎಂದು ನುಡಿದ ಅವರು ಅಂತಾರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆ ನೀಡಿದರು.
ಏತನ್ಮಧ್ಯೆ ಘಟನೆಯನ್ನು ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆನಂದ ಶರ್ಮಾ ಅವರೂ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದು, ಪಾಕಿಸ್ತಾನವು ತನ್ನ ನೆಲದಲ್ಲಿನ ಉಗ್ರವಾದಿ ನೆಲೆಗಳನ್ನು ನೆಲಸಮಗೊಳಿಸಲು 'ತಕ್ಷಣದ' ಹಾಗೂ 'ಅರ್ಥಪೂರ್ಣವಾದ' ಕ್ರಮಗಳನ್ನು ಕೈಗೊಳ್ಳಲು ಇಸ್ಲಾಮಾದಾನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಘಟನೆಯಲ್ಲಿ ಗಾಯಗೊಂಡ ಆಟಗಾರರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಪಾಕಿಸ್ತಾನ ಮೂಲದ ಉಗ್ರಗಾಮಿಗಳು ವಿಶ್ವಕ್ಕೇ ಬೆದರಿಕೆ ಎಂದು ಸಚಿವ ಶರ್ಮಾ ನುಡಿದರು.
"ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ಪ್ರಜ್ಞಾಪೂರ್ವಕ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಂಡಿದೆ. ಇದೊಂದು ಕಠಿಣ ನಿರ್ಧಾರವಾಗಿದ್ದರೂ, ನಮ್ಮ ಕ್ರಿಕೆಟಿಗರ ರಕ್ಷಣೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಅವರು ನುಡಿದರು.
ಶ್ರಿಲಂಕಾ ಕ್ರಿಕೆಟಿಗರು ದ್ವಿತೀಯ ಹಾಗೂ ಕೊನೆಯ ಟೆಸ್ಟ್ ಪಂದ್ಯ ಆಡಲು ಮೂರನೆ ದಿನವಾದ ಮಂಗಳವಾರ ಗಡ್ಡಾಫಿ ಕ್ರೀಡಾಂಗಣಕ್ಕೆ ತೆರಳುತ್ತಿದ್ದ ವೇಳೆಗೆ ಸಶಸ್ತ್ರ ಉಗ್ರರು ಆಟಗಾರರು ತೆರಳುತ್ತಿದ್ದ ಬಸ್ಸಿನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆರು ಮಂದಿ ಕ್ರಿಕೆಟಿಗರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಐದು ಪೊಲೀಸರು ದಾಳಿಯಲ್ಲಿ ದುರಂತ ಅಂತ್ಯ ಕಂಡಿದ್ದಾರೆ. |