ಭಾರತದ ಉಗ್ರವಾದಿ ಜಾಲಗಳಿಗೆ ಬಳಸಲಾಗಿದೆ ಎಂದು ಹೇಳಲಾಗಿರುವ 2000 ಕೋಟಿ ರೂಪಾಯಿ ಮೊತ್ತವು ಎಲ್ಲಿಂದ ಬಂದಿದೆ ಎಂಬ ಮೂಲವನ್ನು ಪತ್ತೆ ಹಚ್ಚಲು ಸರ್ಕಾರವು ಯುದ್ಧೋಪಾದಿಯ ಪ್ರಕ್ರಿಯೆ ಆರಂಭಿಸಿದೆ. ಈ ಆರ್ಥಿಕ ವರ್ಷದಲ್ಲಿ 200 ಬ್ಯಾಂಕ್ ಖಾತೆಗಳಲ್ಲಿ ಸುಮಾರು 2000 ಕೋಟಿ ರೂಪಾಯಿ ಹರಿದಿರುವುದು ಪತ್ತೆಯಾಗಿದೆ.
ಹಣಕಾಸು ಗುಪ್ತಚರ ಘಟಕ(ಎಫ್ಐಯು)ವು ರಾಷ್ಟ್ರದಲ್ಲಿ 200ಕ್ಕಿಂತಲೂ ಹೆಚ್ಚು ವಹಿವಾಟುಗಳನ್ನು ಉಗ್ರರಿಗೆ ಹಣಕಾಸು ಒದಗಿಸಿರುವ ವಹಿವಾಟುಗಳೆಂದು ಗುರತಿಸಲಾಗಿದ್ದು, ಈ ಹಣಕಾಸು ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಕೆಲವು ಪ್ರಕರಣಗಳಲ್ಲಿ ಹಲವಾರು ನಗದು ವಹಿವಾಟು ವರದಿಗಳು(ಸಿಟಿಆರ್) ಭಾರತದಲ್ಲಿ ಹೂಡಿಕೆ ಎಂಬಂತೆ ತೋರಿಸಲಾಗಿದ್ದು, ಇವುಗಳ ಮೂಲವು ಬಹಮಾಸ್, ಮಾರಿಶಸ್, ಕೂಕ್ಸ್ ದ್ವೀಪ ಹಾಗೂ ಕೊಲ್ಲಿರಾಷ್ಟ್ರಗಳ ಮೂಲಗಳತ್ತ ಬೆಟ್ಟು ಮಾಡಿವೆ.
ಈ ಶಂಕಿತ ವಹಿವಾಟು ವರದಿಗಳನ್ನು ಹೆಚ್ಚಿನ ತನಿಖೆಗಾಗಿ ಎಫ್ಐಯು ರಾಷ್ಟ್ರದ ಇತರ ತನಿಖಾ ಹಾಗೂ ಜಾರಿ ಸಂಸ್ಥೆಗಳಿಗೆ ಕಳುಹಿಸಿದೆ. ಇದರಲ್ಲಿ ಇಂಟಲಿಜೆನ್ಸ್ ಬ್ಯೂರೋ ಮತ್ತು ಆದಾಯ ತೆರಿಗೆ ಸಂಸ್ಥೆಯೂ ಸೇರಿವೆ.
ಈ ಖಾತೆಗಳ ತನಿಖೆಗಾಗಿ ಸಹಾಯ ಒದಗಿಸುವಂತೆ 2008-09ರಲ್ಲಿ ಸುಮಾರು 30 ರಾಷ್ಟ್ರಗಳನ್ನು ಮನವಿ ಮಾಡಿಕೊಳ್ಳಲಾಗಿದೆ. ಹಾಗಾಗಿ ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರಿಗೆ ಯಾವುದಾದರೂ ಅಂತಾರಾಷ್ಟ್ರೀಯ ಜಾಲಗಳು ಹಣಕಾಸು ಒದಗಿಸುತ್ತಿದ್ದರೆ ಇದನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ವಿರುದ್ಧ ಹೋರಾಟ(ಸಿಎಫ್‌ಟಿ)ದಡಿ ಸಂಸ್ಥೆಯು ಶಂಕಿತ ಖಾತೆಗಳನ್ನು ಪತ್ತೆ ಹಚ್ಚಲು ಕಾರ್ಯ ಕೈಗೊಂಡಿದೆ. ಅಮೆರಿಕದ 9/11ರ ದಾಳಿಯ ಬಳಿಕ ಸಿಎಫ್‌ಟಿಯನ್ನು ಆರಂಭಿಸಲಾಗಿದೆ. ಭಾರತದಲ್ಲಿ ನೆಲೆಗಳಿರುವ ಉಗ್ರರು ಈ ನಿಧಿಯ ಭಾಗವನ್ನು ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿತ್ತು. |