ತನ್ನ ಸಹೋದರ ಮತ್ತು ತಾಯಿಗಾಗಿ ದುಡಿಯುತ್ತೇನೆ ಎಂದು ಹೇಳಿರುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ, ತನ್ನ ಸಕ್ರಿಯ ರಾಜಕೀಯ ಸೇರ್ಪಡೆಯನ್ನು ತಳ್ಳಿ ಹಾಕಿದ್ದಾರಲ್ಲದೆ, ತನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ದಿನಪೂರ್ತಿ ಪ್ರವಾಸ ಮಾಡಿದ ಚುಂಬಕ ಆಕರ್ಷಣೆಯ ಈ ನಾಯಕಿ, ಪಕ್ಷದ ಕಾರ್ಯಕರ್ತನ್ನು ಭೇಟಿಯಾಗಿ ಅವರಿಗೆ ಗೆಲುವಿನ ಸಲಹೆ ಸೂಚನೆಗಳನ್ನು ನೀಡಿದರು." ನನಗೆ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆಗಳು ಇಲ್ಲ. ನಾನು ಇಲ್ಲಿಗೆ ಪಕ್ಷವನ್ನು ಬಲಪಡಿಸಲು ಮತ್ತು ತನ್ನ ಸಹೋದರ ರಾಹುಲ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿಯವರ ಪರವಾಗಿ ಪ್ರಚಾರಕ್ಕಾಗಿ ಬಂದಿದ್ದೇನೆ. ಅವರು ರಾಷ್ಟ್ರಾದ್ಯಂತ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಮಾಡುವುದರಲ್ಲಿ ನಿರತರಾಗಿದ್ದಾರೆ" ಎಂದು ಅವರು ಮನ್ಶಿಗಂಜ್ ಅತಿಥಿಗೃದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ನುಡಿದರು.ನೀವು ಚುನಾವಣೆಯಲ್ಲಿ ಸ್ಫರ್ಧಿಸಬೇಕೆಂಬ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಬೇಡಿಕೆಯನ್ನು ಪರಿಗಣಿಸುವಿರೇ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಹಳೆಯ ಬೇಡಿಕೆಯಾಗಿದ್ದು, ತಾನು ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ ಎಂದು ನುಡಿದರು.ರಾಹುಲ್ ಮತ್ತು ಪ್ರಿಯಾಂಕ ಕುರಿತು ಬಿಜೆಪಿ ನಾಯಕ ಆಡ್ವಾಣಿಯವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರಿಯಾಂಕ, ತಾನು ರಾಜಕೀಯ ವ್ಯಕ್ತಿಯಲ್ಲದ ಕಾರಣ ಈ ಹೇಳಿಕೆಗಳಿಗೆ ತಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.ಇದಕ್ಕೂ ಮುನ್ನ ಗೌರಿಗಂಜ್‌ನಲ್ಲಿ ಕಾಂಗ್ರೆಸ್ ಸೇವಾದಳದ ಸಭೆ ನಡೆಸಿದ ಯುವ ನಾಯಕಿ, ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧರಾಗಲು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅಲ್ಲದೆ, ಯಾವುದೇ ನಿರೀಕ್ಷೆಗಳಿಲ್ಲದೆ ಜನತೆಯ ಸೇವೆ ಮಾಡುವವರು ಮಾತ್ರ ರಾಜಕೀಯದಲ್ಲಿ ಸ್ಮರಣೀಯರಾಗಿರುತ್ತಾರೆ ಎಂದು ನುಡಿರುವುದಾಗಿ ಮೂಲಗಳು ತಿಳಿಸಿವೆ. ಮುಚ್ಚಿದ ಬಾಗಿಲಿನ ಈ ಸಭೆಗೆ ಮಾಧ್ಯಮದವರಿಗೆ ಪ್ರವೇಶವಿರಲಿಲ್ಲ. |