ಮುಂಬೈಯಲ್ಲಿ ಕಳೆದ ನವೆಂಬರ್ 26ರಂದು ನಡೆಸಲಾಗಿರುವ ಉಗ್ರವಾದಿ ದಾಳಿಯ ವೇಳೆ ಜೀವಂತ ಸೆರೆಸಿಕ್ಕಿರುವ ಏಕೈಕ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‌ನನ್ನು ಇಂಡೋ ಟಿಬೇಟಿಯನ್ ಗಡಿ ಪೊಲೀಸ್(ಐಟಿಬಿಪಿ)ನ ಆಯ್ದ ಸಿಬ್ಬಂದಿಗಳು ಕಾವಲು ಕಾಯಲಿದ್ದಾರೆ ಎಂದು ಕ್ರೈಂಬ್ರಾಂಚ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತ್ಯಂತ ಅಮೂಲ್ಯ ಕೈದಿಯಾಗಿರುವ ಆಮೀರ್ ಕಸಬ್‌ನನ್ನು ಅರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿ ಇರಿಸಲಾಗಿದ್ದು, ಆತನನ್ನು 24 ಗಂಟೆಯೂ ಕಣ್ಣಲ್ಲಿಕಣ್ಣಿಟ್ಟು ಕಾಯಲಾಗುತ್ತಿದೆ.ಐಟಿಬಿಪಿ ಸಿಬ್ಬಂದಿಗಳು ಸದ್ಯವೇ ಕಸಬ್ ಕಾವಲಿನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಮುಂಬೈ ಪೊಲೀಸ್ ರಾಜ್ಯ ಸರ್ಕಾರಕ್ಕೆ ವಿನಂತಿಯಲ್ಲಿ ಸಲ್ಲಿಸಿದ್ದು, ರಾಜ್ಯಸರ್ಕಾರವು ಈ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಕೇಂದ್ರಸರ್ಕಾರವು ಮನವಿಯನ್ನು ಸ್ವೀಕರಿಸಿದೆ ಎಂಬುದಾಗಿ ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ತಿಳಿಸಿದ್ದಾರೆ.ಐಟಿಬಿಪಿ ಸಿಬ್ಬಂದಿಗಳಿಗೆ ಅತ್ಯುನ್ನತ ತರಬೇತಿ ನೀಡಲಾಗಿದ್ದು ಅವರು ಯಾವುದೇ ಪರಿಸ್ಥಿತಿ ನಿಭಾಯಿಸಲು ಸಮರ್ಥರಾಗಿದ್ದಾರೆ. ಅವರು ಕಸಬ್‌ನ ವಿಚಾರಣೆ ಮುಗಿಯುವ ತನಕ ಆತನನ್ನು 24 ಗಂಟೆಯೂ ಕಾವಲು ಕಾಯಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.ಕಸಬ್‌ನನ್ನು ಭದ್ರತೆಯ ದೃಷ್ಟಿಯಿಂದ ಜೈಲಿನಲ್ಲಿ ಇತರ ಕೈದಿಗಳಿಂದ ಪ್ರತ್ಯೇಕವಾಗಿ ಏಕಾಂಗಿಯಾಗಿ ಇರಿಸಲಾಗಿದೆ. ಅಲ್ಲದೆ ಸುರಕ್ಷಾ ದೃಷ್ಟಿಯಿಂದ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿಲ್ಲ, ಬದಲಿಗೆ ನ್ಯಾಯಾಧೀಶರು ಜೈಲಿನಲ್ಲೇ ವಿಚಾರಣೆ ನಡೆಸಿದ್ದರು. |