ರಾಷ್ಟ್ರದ ಮುಂದಿನ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ)ರಾಗಿ ನವಿನ್ ಚಾವ್ಲಾ ಅವರ ನೇಮಿಸಬೇಕೆಂಬ ಸರ್ಕಾರದ ಶಿಫಾರಸ್ಸನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬುಧವಾರ ಅಂಗೀಕರಿಸಿದ್ದಾರೆ.
ಪ್ರಸಕ್ತ ಚುನಾವಣಾ ಆಯುಕ್ತರಲ್ಲೊಬ್ಬರಾಗಿರುವ ಚಾವ್ಲಾ ಅವರು ಎಪ್ರಿಲ್ 21ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಎಪ್ರಿಲ್ 20ಕ್ಕೆ ಹಾಲಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಅವರ ಅಧಿಕಾರಾವಧಿ ಮುಗಿಯಲಿದೆ.
ಚಾವ್ಲಾ ಅವರನ್ನು ವಜಾಗೊಳಿಸಬೇಕು ಎಂಬುದಾಗಿ ಗೋಪಾಲಸ್ವಾಮಿ ಅವರು ಮಾಡಿದ್ದ ವಿವಾದಾಸ್ಪದ ಶಿಫಾರಸ್ಸನ್ನು ಅಧ್ಯಕ್ಷರು ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಈ ನೇಮಕಾತಿ ಅಂಗೀಕಾರ ಲಭಿಸಿದೆ. ಚಾವ್ಲಾ ಅವರು ಕಾಂಗ್ರೆಸ್ ಪಕ್ಷಪಾತಿಯಾಗಿದ್ದಾರೆ ಎಂದು ದೂರಿ ಕಳೆದ ಜನವರಿ 31ರಂದು ಗೋಪಾಲಸ್ವಾಮಿ ರಾಷ್ಟ್ರಪತಿಯವರಿಗೆ ದೂರು ನೀಡಿದ್ದರು. ಮಾಜಿ ಐಎಎಸ್ ಅಧಿಕಾರಿ ಎಸ್.ವೈ. ಖುರೇಶಿ ಅವರು, ತ್ರಿಸದಸ್ಯ ಆಯೋಗದ ಇನ್ನೋರ್ವ ಸದಸ್ಯರಾಗಿದ್ದಾರೆ.
1969ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಚಾವ್ಲಾ ಅವರನ್ನು ಮೇ, 2005ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಿಸಲಾಗಿದ್ದು, ಅವರು 2010ರ ತನಕ ಸೇವೆ ಸಲ್ಲಿಸಲಿದ್ದಾರೆ.
ಗೋಪಾಲಸ್ವಾಮಿಯವರು ಶಿಫಾರಸ್ಸು ಮಾಡಿದ ಕೆಲವೇ ದಿನಗಳಲ್ಲಿ ಕಾನೂನು ಸಚಿವ ಎಚ್.ಆರ್.ಭಾರಧ್ವಾಜ್ ಅವರು ಈ ವಿವಾದವು ಚಾವ್ಲಾ ಅವರ ಹುದ್ದೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹೇಳಿದ್ದರು. ಅತ್ಯಂತ ಹಿರಿಯ ಆಯುಕ್ತರನ್ನು ಮುಖ್ಯಚುನಾವಣಾ ಆಯುಕ್ತರನ್ನಾಗಿ ನೇಮಿಸುವುದು ಸರ್ಕಾರದ ನೀತಿಯಾಗಿದ್ದು, ಇದು ಮುಂದುವರಿಯಲಿದೆ ಎಂದು ಅವರು ಹೇಳಿದ್ದರು.
|