ಎಲ್ಲಾ ರಾಜ್ಯಗಳೂ ತಮ್ಮ ಜಾಗ ಮಂಜೂರಾತಿ ಯೋಜನೆಯಲ್ಲಿ ಅಶಕ್ತ ವ್ಯಕ್ತಿಗಳಿಗೆ ರಿಯಾಯಿತಿ ದರದಲ್ಲಿ ನೀಡಲು ಭೂಮಿಯನ್ನು ಮೀಸಲಿಡಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.ಭೂಮಿ ಮಂಜೂರಾತಿ ಕುರಿತು ಯಾವುದೇ ರಾಜ್ಯಸರ್ಕಾರ ಅಥವಾ ಸ್ಥಳೀಯ(ಮುನ್ಸಿಪಲ್) ಮಂಡಳಿಯು ಭೂಮಿ ಮಂಜೂರಾತಿ ಯೋಜನೆ ಕುರಿತು ಕಾರ್ಯಕೈಗೊಳ್ಳುವ ವೇಳೆ ಅವರು ಅಂಗವಿಕಲ ವ್ಯಕ್ತಿಗಳಿಗೆ ರಿಯಾಯಿತಿ ದರದಲ್ಲಿ ಮೀಸಲಾತಿ ಒದಗಿಸಬೇಕು ಎಂಬುದಾಗಿ ಮುಖ್ಯ ನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ಸದಾಶಿವಮ್ ಮತ್ತು ಜೆ.ಎ. ಪಂಚಾಲ್ ಹೇಳಿದ್ದಾರೆ.ಅಂಗವಿಕಲ ವ್ಯಕ್ತಿಗಳ ಕಾಯ್ದೆ 1995ರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ) ನಿಬಂಧನೆಯ ಪ್ರಕಾರ ರಾಜ್ಯವು ಅಂಗವಿಕಲ ವ್ಯಕ್ತಿಗಳಿಗೆ ಆದ್ಯತೆ ಮತ್ತು ರಿಯಾಯಿತಿ ದರದಲ್ಲಿ ಭೂಮಿ ಒದಗಿಸುವುದು ಕಡ್ಡಾಯವಾಗಿದೆ. ಇದರ ಆಧಾರದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಈ ಮಹತ್ವದ ಆದೇಶ ನೀಡಿದೆ. ಸಲಿಲ್ ಚತುರ್ವೇದಿ ಎಂಬ ಅಂಗವಿಕಲ ವ್ಯಕ್ತಿಯು ಪ್ರಶಾಂತ್ ಭೂಷಣ್ ಎಂಬ ವಕೀಲರ ಮೂಲಕ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2004ರಲ್ಲಿ ಸಲ್ಲಿಸಿದ್ದರು. ಇದರಲ್ಲಿ ಸರ್ಕಾರವು ಪ್ರಸ್ತಾವಿತ ಕಾಯ್ದೆಯ ಸೆಕ್ಷನ್ 43ರನ್ನು ಯಾವತ್ತೂ ಜಾರಿ ಮಾಡಿಲ್ಲ ಎಂದು ದೂರಲಾಗಿತ್ತು.ಬಹಳ ಹಿಂದೆಯೇ ಈ ಕುರಿತು ನೋಟೀಸು ನೀಡಲಾಗಿದ್ದರೂ, ಈ ಕಾನೂನನ್ನು ಹೆಚ್ಚಿನ ರಾಜ್ಯಗಳು ಇನ್ನೂಅಳವಡಿಸಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಗಮನಿಸಿದೆ.ಕೆಲವು ರಾಜ್ಯಗಳು ಆಂಶಿಕವಾಗಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರೂ ಇದು ಕಾನೂನು ಜಾರಿಯ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ನ್ಯಾಯಾಲಯ ತೀರ್ಪುನೀಡುವ ವೇಳೆಗೆ ಹೇಳಿದೆ. |