ಅನುಭವಿ ನೇತಾ(ನಾಯಕ)ಗಳಾಗ ಬಯಸಿರುವ ರಾಜಕಾರಣಿಗಳಿಗೆ ಶಾಲೆಯೊಂದು ಸಲಹೆ ಸೂಚನೆ, ತರಬೇತಿ ನೀಡುತ್ತದೆ. ಜಾರ್ಖಂಡ್‌ನಲ್ಲಿರುವ ನೇತಾಗಿರಿ ವಿದ್ಯಾಲಯ ಈ ಕಾರ್ಯಕ್ಕೆ ಮುಂದಾಗಿದೆ. ಜ್ಞಾನ್ ರಂಜನ್ ಎಂಬ ಪ್ರಮುಖ ಕಾಂಗ್ರೆಸ್ ನಾಯಕನ ಸಹೋದರ ರಾಜ್ ರಂಜನ್ ಎಂಬವರು 2001ರಲ್ಲಿ ಈ ಶಾಲೆಯನ್ನು ಸ್ಥಾಪಿಸಿದ್ದಾರೆ.
ಅನುಭವಿ ನಾಯಕರಾಗಲು ಬೇಕಾದ ಸಲಹೆ ಸೂಚನೆ ನೀಡುವುದರೊಂದಿಗೆ ಈ ಶಾಲೆಯಲ್ಲಿ ತನ್ನ ಕಾರ್ಯಸೂಚಿಯನ್ನು ರಾಜಕೀಯದಲ್ಲಿ ಹೇಗೆ ಉತ್ತೇಜಿಸಬೇಕು, ಕಷ್ಟಕರ ಪರಿಸ್ಥಿತಿಗಳಲ್ಲಿ ತನ್ನನ್ನು ತಾನು ಹೇಗೆ ಸಮರ್ಥಿಸಿಕೊಳ್ಳಬೇಕು ಮತ್ತು ಪ್ರಮುಖ ವಿಚಾರದಿಂದ ಗಮನ ಬೇರೆಕಡೆ ಕೇಂದ್ರೀಕರಿಸಲು ವಿರೋಧಿಗಳು ನಗಣ್ಯ ವಿಚಾರಗಳಲ್ಲಿ ಮಗ್ನವಾಗಿರುವಂತೆ ಹೇಗೆ ಮಾಡಬೇಕು ಮುಂತಾದ ವಿಚಾರಗಳನ್ನು ಇಲ್ಲಿ ಕಲಿಸಿಕೊಡಲಾಗುವುದಂತೆ.
ಪ್ರವೇಶ ಪತ್ರಕ್ಕೆ 50 ರೂಪಾಯಿ ಹೊರತುಪಡಿಸಿದರೆ, ಆರು ತಿಂಗಳ ಈ ಕೋರ್ಸಿಗೆ ನೇತಾಗಿರಿ ವಿದ್ಯಾಲಯ ಇನ್ಯಾವುದೇ ಶುಲ್ಕ ವಿಧಿಸುವುದಿಲ್ಲವಂತೆ. 'ಅಧ್ಯಯನ' ಮುಗಿದ ಬಳಿಕ ವಿದ್ಯಾಲಯ ಸರ್ಟಿಫಿಕೇಟನ್ನೂ ನೀಡುತ್ತದೆ.
ಈ ಶಾಲೆ ಇನ್ನೂ ನೋಂದಣಿಯಾಗಿಲ್ಲ. ಜಾರ್ಖಂಡ್ ಮಾನವ ಸಂಪನ್ಮೂಲ ಇಲಾಖೆಯು ಈ ಪ್ರಕ್ರಿಯೆಯ ಉಪಕ್ರಮಕ್ಕೆ ಮುಂದಾಗಿದೆ ಎಂಬುದಾಗಿ ರಾಜ್ ರಂಜನ್ ಹೇಳುತ್ತಾರೆ. ಜನಸಾಮಾನ್ಯರಲ್ಲಿ ರಾಜಕೀಯದ ಕುರಿತು ಆಸಕ್ತಿ ಹುಟ್ಟಿಸುವುದು ಈ ಶಾಲೆಯ ಆರಂಭಕ್ಕೆ ಮುಖ್ಯಕಾರಣವಂತೆ.
"ಈ ವರ್ಷ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಯೋಜಿಸಿರುವುದಾಗಿ ಹೇಳುವ ರಾಜ್ ನಮ್ಮ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಪರಿಣಾಮ ಬೀರುವುದು ನಿಸ್ಸಂಶಯ ಎನ್ನುತ್ತಾರೆ. ಕೆಲವು ಸಂಭಾವ್ಯ ಅಭ್ಯರ್ಥಿಗಳು ತಮ್ಮನ್ನು ಸಂಪರ್ಕಿಸಿದ್ದು, ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತಿರುವುದಾಗಿ ರಾಜ್ ತಿಳಿಸಿದ್ದಾರೆ.
ಈ ಶಾಲೆಗೆ ಸೇರಲು ಇರುವ ಏಕೈಕ ಷರತ್ತೆಂದರೆ ಅಭ್ಯರ್ಥಿಯು ಹದಿನೆಂಟರ ಹರೆಯದ ಮೇಲಿನವನಾಗಿರಬೇಕು. ಪ್ರತಿ ಬ್ಯಾಚಿನಲ್ಲಿ 30 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.
|