ಪಾಕಿಸ್ತಾನವು ತನ್ನೊಳಗಿನಿಂದಲೇ ಯುದ್ಧವನ್ನು ಎದುರಿಸುತ್ತಿದೆ ಎಂದು ಅಲ್ಲಿನ ಸೆನೆಟರ್ ಹಾಗೂ ಮಾನವ ಹಕ್ಕುಗಳ ಸಹ-ಅಧ್ಯಕ್ಷ(ಎಚ್ಆರ್‍ಸಿಪಿ) ಇಕ್ಬಾಲ್ ಹೈದರ್ ಹೇಳಿದ್ದಾರೆ. ಅಲ್ಲದೆ, ಸ್ವಾತ್ ಕಣಿವೆಯಲ್ಲಿ ತಾಲಿಬಾನ್‌ನೊಂದಿಗಿನ ಶಾಂತಿ ಒಪ್ಪಂದಕ್ಕೆ ಅವರು ಅಸಮ್ಮತಿ ಸೂಚಿಸಿದ್ದಾರೆ.
ಉಗ್ರಗಾಮಿಗಳು ಮತ್ತು ಅವರ ಜಾಲವನ್ನು ಮಟ್ಟ ಹಾಕದಿದ್ದರೆ ಅವರು ಪಾಕಿಸ್ತಾನವನ್ನೇ ತೊಡೆದುಹಾಕಲಿದ್ದಾರೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.
"ಉಗ್ರವಾದಿಗಳು, ಅದರಲ್ಲೂ ವಿಶೇಷವಾಗಿ ತಾಲಿಬಾನಿಗಳಿಗೆ ಯಾವುದೇ ಧಾರ್ಮಿಕ ಕಾರ್ಯಸೂಚಿ ಇಲ್ಲ. ಪಾಕಿಸ್ತಾನದ ಮೇಲಿನ ಹಿಡಿತವೇ ಅವರ ಗುರಿ" ಎಂಬುದಾಗಿ ಅವರು ನುಡಿದರು. ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಭಾರತ-ಪಾಕಿಸ್ತಾನ ಜನತಾ ವೇದಿಕೆಯ ನಿಯೋಗದ ಅಂಗವಾಗಿ ಅವರು ನಾಗ್ಪುರಕ್ಕೆ ಅಗಮಿಸಿದ್ದರು.
ಮುಂಬೈದಾಳಿ ಬಳಿಕದ ಉದ್ವಿಗ್ನತೆಯನ್ನು ಶಾಂತಗೊಳಿಸಲು ಇದೊಂದು ಜಂಟಿ ಪ್ರಯತ್ನವಾಗಿದ್ದು ನಿಯೋಗದ ಸದಸ್ಯರು ರಾಷ್ಟ್ರದ ಇತರ ನಗರಗಳಿಗೂ ಪ್ರಯಾಣಿಸುತ್ತಿದ್ದಾರೆ.
ಹೈದರ್ ಅವರು ರಾಷ್ಟ್ರೀಯ ಸ್ವಯಂಸೇವಕ್ ಸಂಘ(ಆರ್ಎಸ್ಎಸ್)ನ ಮುಖ್ಯಕಚೇರಿಗೂ ಭೇಟಿ ನೀಡಿದರಾದರೂ, ಕಚೇರಿಯಲ್ಲಿ ಯಾರೂ ಇರಲಿಲ್ಲ. |