ತಾನೂ ಚುನಾವಣೆಗೆ ಸ್ಫರ್ಧಿಸಬಹುದು ಎಂದು ಹೇಳುವ ಮೂಲಕ ಪ್ರಧಾನಿ ಸ್ಥಾನದ ಮೇಲೆ ತನ್ನ ಕಣ್ಣೂ ಇದೆ ಎಂಬ ಸೂಚನೆ ನೀಡಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರಿಗೆ ಮುಜುಗರ ಉಂಟು ಮಾಡಿದ್ದ ಮಾಜಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು, ಗುರುವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಆಡ್ವಾಣಿಯವರನ್ನು ಭೇಟಿ ಮಾಡಿ ಅಚ್ಚರಿಹುಟ್ಟಿಸಿದರಲ್ಲದೆ, ಅವರೊಂದಿಗೆ ಊಟವನ್ನೂ ಮಾಡಿದರು." ಶೇಖಾವತ್ ಆಡ್ವಾಣಿಯವರನ್ನು ಅವರ ನಿವಾಸದಲ್ಲಿ ಭೇಟಿಮಾಡಿದ್ದು ಸುಮಾರು ಎರಡು ಗಂಟೆಗಳ ಕಾಲಕಳೆದರು. ಅವರು ಹಿರಿಯ ನಾಯಕರೊಂದಿಗೆ ಊಟವನ್ನೂ ಮಾಡಿದರು" ಎಂಬುದಾಗಿ ಆಡ್ವಾಣಿಯವರಿಗೆ ಹತ್ತಿರದ ಮೂಲಗಳು ತಿಳಿಸಿವೆ.ಶೇಖಾವತ್ ಅವರು ಉಪರಾಷ್ಟ್ರಪತಿಯಾಗಿದ್ದ ವೇಳೆ ಪಕ್ಷತೊರೆದಿದ್ದರು. ಇವರು ರಾಜಸ್ಥಾನ ವಿಧಾನಸಭಾ ಚುನಾವಣೆಗಳು ನಡೆದ ಬಳಿಕ, ಡಿಸೆಂಬರ್ ತಿಂಗಳಲ್ಲಿ ತಾನೂ ಚುನಾವಣೆಯಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದು, ತನ್ನ ಕಣ್ಣೂ ಪ್ರಧಾನಿ ಪಟ್ಟದ ಮೇಲಿದೆ ಎಂಬರ್ಥದ ಮಾತುಗಳನ್ನಾಡಿ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದರು. ಆಡ್ವಾಣಿಯಿಂದ ಹಿರಿಯರಾಗಿರುವ ಶೇಖಾವತ್ ಅವರನ್ನು ಆ ವೇಳೆ, 'ನೀವು ಪ್ರಧಾನಿ ಅಭ್ಯರ್ಥಿಯೇ' ಎಂದು ಕೇಳಲಾಗಿದ್ದ ಪ್ರಶ್ನೆಗೆ ಮಹತ್ವಾಕಾಂಕ್ಷಿ ಉತ್ತರ ನೀಡಿದ್ದರು. ವಸುಂಧರರಾಜೆ ನೇತೃತ್ವದ ರಾಜಸ್ಥಾನ ಸರ್ಕಾರದ ಮೇಲಿದ್ದ ಭ್ರಷ್ಟಾಚಾರ ಆರೋಪದ ಕುರಿತು ತನಿಖೆಗೂ ಅವರು ಒತ್ತಾಯಿಸಿದ್ದರು. ವಸುಂಧಾರ ಆಡ್ವಾಣಿಯವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.ಈ ಎಲ್ಲ ವಿವಾದಗಳ ಬಳಿಕ ಈ ಇಬ್ಬರು ಹಿರಿಯ ನಾಯಕರು ಪರಸ್ಪರ ಭೇಟಿ ಮಾಡಿರದಿದ್ದ ಹಿನ್ನೆಲೆಯಲ್ಲಿ ಗುರುವಾರದ ಭೇಟಿ ಮಹತ್ವದ್ದು ಎಂದು ಊಹಿಸಲಾಗದೆ. ಶೇಖಾವತ್ ತಾನೂ ಚುನಾವಣಾ ಸ್ಫರ್ಧಾಕಾಂಕ್ಷಿ ಎಂದು ಹೇಳಿದ್ದ ಬಳಿಕ ಆಡ್ವಾಣಿ ಅವರು ಈ ಕುರಿತು ಮೌನವಹಿಸಿದ್ದರು.ಆದರೆ, ತನ್ನ ಆರೋಗ್ಯದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದು 86ರ ಹರೆಯದ ಶೇಖಾವತ್ ಕಳೆದ ತಿಂಗಳು ಘೋಷಿಸಿದ್ದರು. |