ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯನ್ನು ತಡೆಯಲು ಉತ್ತರ ಪ್ರದೇಶದಲ್ಲಿ ಪ್ರಥಮ ಬಾರಿಗೆ ನೋಡಲ್ ಅಧಿಕಾರಿಗಳನ್ನು ಚುನಾವಣಾ ಆಯೋಗವು ನೇಮಿಸಿದ್ದು, ತಾರಾ ಪ್ರಚಾರಕರು ಆಯೋಗದ ಸೂಕ್ಷ್ಮ ಪರಿಶೀಲನೆಗೊಳಪಡಲಿದ್ದಾರೆ.
"ವಿವಿಧ ಪಕ್ಷಗಳ ತಾರಾ ಪ್ರಚಾರಕರಿಂದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯನ್ನು ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿರುವುದಾಗಿ ಚುನಾವಣಾ ಇಲಾಖಾಧಿಕಾರಿಗಳು ಶನಿವಾರ ಹೇಳಿದ್ದಾರೆ.
ಪ್ರಥಮಬಾರಿಗೆ ನೇಮಕವಾಗಿರುವ ಈ ನೋಡಲ್ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರುಗಳು ಮತ್ತು ಪ್ರತಿಯಾಗಿ ಕೈಗೊಳ್ಳಲಾದ ಕ್ರಮಗಳ ದಾಖಲೆಗಳನ್ನು ಇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗಂಭೀರ ಸ್ವರೂಪದ ದೂರುಗಳನ್ನು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪದ್ಧತಿಯಂತೆ ನೋಂದಾಯಿತ ಪಕ್ಷ ಒಂದರ 20 ತಾರಾ ಪ್ರಚಾರಕರು ಮತ್ತು ಅಂಗೀಕೃತ ಪಕ್ಷಗಳ 40 ತಾರಾ ಪ್ರಚಾರಕರು ಚುನಾವಣಾ ಪ್ರಚಾರ ಮಾಡಬಹುದಾಗಿದೆ.
ಒಂದೊಮ್ಮೆ ನೀತಿಸಂಹಿತೆಯ ಉಲ್ಲಂಘನೆಯಾದರೆ, ಅಭ್ಯರ್ಥಿ ಹಾಗೂ ಪಕ್ಷಕ್ಕೆ ಪ್ರತ್ಯೇಕ ನೋಟಿಸುಗಳನ್ನು ನೀಡಲಾಗುವುದು. ಇದಲ್ಲದೆ, ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಇದರ ಉಲ್ಲಂಘನೆಯಾದರೆ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದಾರೆ. |