ತೃತೀಯ ರಂಗದ ಕುರಿತು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಮಾಡಿರುವ ವಾಗ್ದಾಳಿಗೆ ಪ್ರತಿಕ್ರಿಯಿಸಿರುವ ಸಿಪಿಐ(ಎಂ), ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಸರ್ಕಾರ ರೂಪಿಸುವ ಸಲುವಾಗಿ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿಯರೊಂದಿಗೆ ಚುನಾವಣಾ ನಂತರದ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂಬುದಾಗಿ ದೂರಿದೆ.
ಸಿಪಿಐ(ಎಂ) ನಾಯಕರಾದ ಸಿತಾರಾಂ ಯೆಚೂರಿ ಮತ್ತು ಸಲೀಮ್ ಮೊಹಮ್ಮದ್ ಅವರು ಮಮತಾ ಬ್ಯಾನರ್ಜಿಯವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಸಿಪಿಐ ನೇತೃತ್ವದ ಎಡರಂಗವನ್ನು ಹಿಂದಿಕ್ಕಲು ಬ್ಯಾನರ್ಜಿ ಕಾಂಗ್ರೆಸ್‌ನೊಂದಿಗೆ ಚುನಾವಣೆ ಸ್ಫರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಎನ್‌ಡಿಎಗೂ ತನ್ನ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ದೂರಿದ್ದಾರೆ.
ಇಲ್ಲಿ ನಡೆಯುತ್ತಿರುವ ಪಕ್ಷದ ಕೇಂದ್ರೀಯ ಸಮಿತಿಯ ಎರಡು ದಿನಗಳ ಸಮಾವೇಶದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತೃಣಮೂಲ ಕಾಂಗ್ರೆಸ್‌ನೊಂದಿಗೆ ಬಿಜೆಪಿಯ ಸಂಬಂಧ ಏನೆಂದು ಆಡ್ವಾಣಿ ವಿವರಿಸುತ್ತಾರೆ ಎಂದು ಕೇಳಿದ ಅವರು, ಅದು ಮೈತ್ರಿಯೇ ಅಥವಾ ರಂಗವೇ ಇಲ್ಲ ಸೀಟು ಹಂಚಿಕೆಯ ಒಪ್ಪಂದವೇ ಎಂದು ಪ್ರಶ್ನಿಸಿದ್ದಾರೆ.
ಆಡ್ವಾಣಿ ಅವರು ಕೋಲ್ಕತ್ತಾದಲ್ಲಿ ನಡೆದ ಸಮಾರಂಭ ಒಂದರಲ್ಲಿ ತೃತೀಯ ರಂಗದ ಮೇಲೆ ವಾಗ್ದಾಳಿ ನಡೆಸಿದರಾದರೂ, ಮಮತಾ ವಿರುದ್ಧ ಚಕಾರವೆತ್ತದಿರುವುದಕ್ಕೆ ಕಾರಣವೇನು ಎಂಬುದಾಗಿ ಕಮ್ಯೂನಿಸ್ಟ್ ನಾಯಕರು ಪ್ರಶ್ನಿಸಿದ್ದಾರೆ.
|