ಮುಂಬೈದಾಳಿಕೋರ ಅಜ್ಮಲ್ ಅಮೀರ್ ಕಸಬ್ ಹಾಗೂ ಆತನ ಇತರ ಒಂಬತ್ತು ಮೃತ ಸಹಚರರ ಡಿಎನ್ಎ ಮಾದರಿಗಳನ್ನು ಭಾರತವು ಸದ್ಯವೇ ಇಂಟರ್‌ಪೋಲ್‌ಗೆ ಒಪ್ಪಿಸಲಿದ್ದು, ಇದಕ್ಕೆ ಅಗತ್ಯವಿರುವ ಕ್ರಮಗಳನ್ನು ಗೃಹಸಚಿವಾಲಯವು ಸೋಮವಾರ ಅಂತಿಮಗೊಳಿಸಿದೆ. ಇದಲ್ಲದೆ, ಎಲ್ಲ ಅವಶ್ಯ ವಿವರಣೆಗಳನ್ನು ಈ ವಾರದಲ್ಲಿ ಪಾಕಿಸ್ತಾನಕ್ಕೆ ನೀಡಲೂ ಸಚಿವಾಲಯ ನಿರ್ಧರಿಸಿದೆ.ಗೃಹಕಾರ್ಯದರ್ಶಿ ಮಧುಕರ್ ಗುಪ್ತಾ ಅವರು ಈ ವಿಚಾರವನ್ನು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ. ಅಶ್ವನಿ ಅವರು ಇಂಟರ್‍ಪೋಲ್ ಸಭೆಯ ನಾಯಕತ್ವ ವಹಿಸಿದ್ದಾರೆ. ನವೆಂಬರ್ 26ರಂದು ದಾಳಿನಡೆಸಿದ ವ್ಯಕ್ತಿಗಳ ಪಾತ್ರ ಅಥವಾ ಪರಿಚಯದ ಕುರಿತು ಯಾವದೇ ಸಂಶಯವಿಲ್ಲದಿರುವ ಕಾರಣ, ಈ ಸ್ಥಿತಿಯಲ್ಲಿ ಭಾರತವು ಇಂಟರ್‌ಪೋಲ್‌ನೊಂದಿಗೆ ಯಾವೆಲ್ಲ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಎಂಬ ವಿಚಾರದ ಕುರಿತು ಮಾತುಕತೆ ಕೇಂದ್ರೀಕೃತವಾಗಿತ್ತು.ಇಂಟರ್‌ಪೋಲ್‌ನ ಪ್ರಧಾನ ಕಾರ್ಯದರ್ಶಿ ರೋನಾಲ್ಡ್ ಕೆ ನೋಬ್ಲ್ ಅವರು ತನಿಖಾ ವಿವರಗಳನ್ನು ಹಂಚಿಕೊಳ್ಳುವಲ್ಲಿ ಭಾರತದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡ ಮರುದಿನವೇ ಈ ಪ್ರಕ್ರಿಯೆ ನಡೆದಿದೆ. ಡಿಎನ್‌ಎ ಮಾದರಿ ಸೇರಿದಂತೆ ಭಾರತವು ವಿವರಗಳನ್ನು ನೀಡದೇ ಇದ್ದಲ್ಲಿ ಇಂಟರ್‌ಪೋಲ್ ಏನೂ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಅವರು ಭಾನುವಾರ ಇಸ್ಲಾಮಾಬಾದಿನಲ್ಲಿ ಹೇಳಿದ್ದರು." ಭಾರತವು ತನ್ನೆಲ್ಲಾ ತನಿಖಾ ವಿವರಗಳನ್ನು ಇಂಟರ್‌ಪೋಲ್‌ನೊಂದಿಗೆ ಹಂಚಿಕೊಳ್ಳಬೇಕು ಎಂಬುದು ಕಡ್ಡಾಯವೇನಲ್ಲ. ನಾವು ಸತ್ತಿರುವ ಹಾಗೂ ಬದುಕುಳಿದ ಉಗ್ರರ ಡಿಎನ್ಎ ಸ್ಯಾಂಪಲ್‌ಗಳು ಮತ್ತು ಅವರ ಪ್ರಯಾಣದ ದಾಖಲೆಗಳನ್ನು ಮಾತ್ರ ಹಂಚಿಕೊಳ್ಳಲಿದ್ದೇವೆ. ಈ ವಿವರಣೆಗಳು ಡೇಟಾಬ್ಯಾಂಕಿನೊಂದಿಗೆ ತಾಳೆಯಾಗಬೇಕು ಅಲ್ಲದೆ, ಪಾಕಿಸ್ತಾನವು ಈ ವಿವರಣೆಯನ್ನು ಕೇಳುತ್ತಿದೆ" ಎಂದು ಗೃಹಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. |