ಪ್ರಾಣ ಕಾಪಾಡುವ ವೈದ್ಯರಾಗುವ ಕನಸು ಹೊತ್ತ ವಿದ್ಯಾರ್ಥಿಗಳು ರ‌್ಯಾಗಿಂಗ್ ಹೆಸರಿನಲ್ಲಿ ಪ್ರಾಣವನ್ನೇ ತೆಗೆದ ಹೃದಯ ವಿದ್ರಾವಕ ಘಟನೆ ಹಿಮಾಚಲ ಪ್ರದೇಶದ ವೈದ್ಯ ಕಾಲೇಜೊಂದರಲ್ಲಿ ನಡೆದಿದೆ. ರ‌್ಯಾಗಿಂಗ್ ಎಂಬ ಮಹಾಮಾರಿ ಈಗ ಎಲ್ಲೂ ಇಲ್ಲ ಎಂದು ಹೇಳಿಕೊಳ್ಳುತ್ತಿರುವಾಗಲೇ ಇಂತಹ ಘಟನೆ ಈಗ ಕಾಲೇಜು ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯವಾಗಿದೆ.
ಹಿಮಾಚಲ ಪ್ರದೇಶದ ಮೆಡಿಕಲ್ ಕಾಲೇಜೊಂದರಲ್ಲಿ ಕಳೆದ ಆಗಸ್ಟ್‌ನಲ್ಲಿ ಪ್ರವೇಶ ಪಡೆದ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಅಮನ್ ಕಚ್ರು (19) ಹಿರಿಯ ವಿದ್ಯಾರ್ಥಿಗಳ ರ‌್ಯಾಗಿಂಗ್‌ಗೆ ತನ್ನ ಪ್ರಾಣ ಬಲಿಕೊಟ್ಟ ದುರ್ದೈವಿ. ಸಾಕೇತ್‌ನ ಡಿಪಿಎಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಿಂದ ಡಾ.ರಾಜೇಂದ್ರ ಪ್ರಸಾದ್ ಮೆಡಿಕಲ್ ಕಾಲೇಜು, ತಂಡಾಕ್ಕೆ ಎಂಬಿಬಿಎಸ್ ಓದಲೆಂದು ಅಪಾರ ಕನಸು ಹೊತ್ತ ಅಮನ್ ಪ್ರವೇಶ ಪಡೆದಿದ್ದ. ಮೊದಲಿನಿಂದಲೇ ಹಿರಿಯ ವಿದ್ಯಾರ್ಥಿಗಳ ಉಪಟಳ ತಡೆಯಲಾಗುತ್ತಿಲ್ಲ ಎಂದು ಹಲವು ಬಾರಿ ಮನೆಯವರಿಗೂ ಹೇಳಿದ್ದ. ಆದರೆ, ಯಾರೂ ರ‌್ಯಾಗಿಂಗ್‌ನ ತೀವ್ರತೆ ಪ್ರಾಣವನ್ನೇ ತೆಗೆಯುವಷ್ಟರ ಮಟ್ಟಿಗೆ ತೀವ್ರವಾಗಿರಬಹುದೆಂದು ಅಂದುಕೊಂಡಿರಲಿಲ್ಲ.
ಶುಕ್ರವಾರ ಮಧ್ಯರಾತ್ರಿ ಅಥವಾ ಶನಿವಾರ ಮುಂಜಾವಿನ ವೇಳೆಗೆ ಕುಡಿತದ ಮತ್ತಿನಲ್ಲಿದ್ದ ಮೂರನೇ ವರ್ಷದ ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಹೊಡೆದಿದ್ದರು ಎನ್ನಲಾಗಿದೆ.
ಅಮನ್ ಹೆತ್ತವರು ಹೇಳುವ ಪ್ರಕಾರ, ಅಮನ್ ಹೆಚ್ಚಾಗಿ ತನ್ನ ಮೇಲೆ ನಡೆಯುತ್ತಿದ್ದ ರ‌್ಯಾಗಿಂಗ್ ಬಗ್ಗೆ ಹೇಳುತ್ತಿದ್ದ. ಆದರೆ ಇಷ್ಟು ಗಂಭೀರವಾಗಿರುತ್ತದೆ ಎಂದು ನಾವು ಊಹಿಸಿರಲಿಲ್ಲ. ಅಮನ್ ಸೇರಿದಂತೆ ಮೊದಲ ವರ್ಷದ ವಿದ್ಯಾರ್ಥಿಗಳು ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಆದರೂ ಕಾಲೇಜು ಆಡಳಿತ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ನಮ್ಮ ಮಗನನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ಇನ್ನಾದರೂ ಈ ಬಗ್ಗೆ ಕಾಲೇಜು ಜಾಗೃತವಾದರೆ ಹಲವು ಮಕ್ಕಳ ಪ್ರಾಣ ಉಳಿಯುತ್ತದೆ ಎಂದು ಕಣ್ಣೀರಿಡುತ್ತಾರೆ ಅಮನ್ ಅತ್ತೆ ಇಂದಿರಾಧರ್. ಅಮನ್ ಹುಟ್ಟಿ ಬೆಳೆದಿದ್ದ ಗುರ್‌ಗಾಂವ್‌ಗೆ ಅಮನ್ ಮೃತದೇಹವನ್ನು ಕೊಂಡೊಯ್ಯಲಾಗುತ್ತದೆ. ಆದರೆ ಈಗ ಕೆಲವೇ ವರ್ಷಗಳ ಹಿಂದೆ ಅಮನ್ ಹೆತ್ತವರು ಭಾರತದಿಂದ ಟಾಂಜಾನಿಯಾಕ್ಕೆ ವಲಸೆ ಹೋಗಿದ್ದರು. ದರ್-ಎ-ಸಲಾಂ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರಾಗಿ ಅಮನ್ ತಂದೆ ಕೆಲಸ ಮಾಡುತ್ತಿದ್ದಾರೆ.
ಅಮನ್‌ನ ಎದೆ, ಕಿವಿ, ಮುಖದ ಮೇಲೆ ಭಾರೀ ಹೊಡೆತದ ಗುರುತುಗಳು ದಾಖಲಾಗಿವೆ. ಹಾಸ್ಟೆಲ್ ಮ್ಯಾನೇಜರ್ ವಿದ್ಯಾರ್ಥಿಗಳ ಕೈಯಿಂದ ದೂರು ಸ್ವೀಕರಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಈ ಸಾವನ್ನು ಆತ್ಮಹತ್ಯೆ ಎಂದು ಕಾಲೇಜು ಮುಚ್ಚಿಹಾಕಲು ಯೋಚಿಸಿತ್ತು. ಆದರೆ ವಿದ್ಯಾರ್ಥಿಗಳ ಪೋಷಕರ ಒತ್ತಡದಿಂದ ಮಾಧ್ಯಮಗಳಲ್ಲಿ ಪ್ರಚಾರ ಪಡೆದು ಈಗ ನಾಲ್ಕು ಹಿರಿಯ ವಿದ್ಯಾರ್ಥಿಗಳ ಮೇಲೆ ರ‌್ಯಾಗಿಂಗ್ ಕೇಸು ದಾಖಲಿಸಲಾಗಿದೆ.
ಕಾಂಗ್ರಾ ಎಸ್ಪಿ ಅತುಲ್ ಫುಲೀಲ್‌ಝಿಲೆ ಹೇಳುವಂತೆ, ಭಾನುವಾರ ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿರಬಹುದು. ಮಾರಣಾಂತಿಕವಾಗಿ ಅಮನ್‌ಗೆ ಹೊಡೆದಿರುವುದರಿಂದ ಒತ್ತಡ ಹೆಚ್ಚಿ ಈ ಸಾವು ನಡೆದಿದೆ ಎಂದು ಶಂಕಿಸಲಾಗಿದೆ. ಅಮನ್‌ನ ಕಸಿನ್ ವರ್ಕಿನ್ ಧರ್ ಹೇಳುವಂತೆ, ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಮದ್ಯ ಸೇವಿಸಿ ಬಂದು ರ‌್ಯಾಗಿಂಗ್ ಮಾಡುತ್ತಿದ್ದರು. ಶನಿವಾರವೂ ಇದೇ ರೀತಿ ಕಿರಿಯರ ಮೇಲೆ ದಬ್ಬಾಳಿಕೆ ನಡೆದಿದೆ. ಪ್ರತಿದಿನ ರಾತ್ರಿ ನಡೆಯುವ ಈ ಶೋಷಣೆಯ ಒತ್ತಡ ಹೆಚ್ಚಾಗಿ ಭಾನುವಾರವೂ ಇದೇ ರೀತಿ ನಡೆದುದರ ಪರಿಣಾಮವಾಗಿ ಅಮನ್ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಹಿಮಾಚಲ ಪ್ರದೇಶ ಸರ್ಕಾರ ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದು ಹಾಸ್ಟೆಲ್ ವಾರ್ಡನ್ ಹಾಗೂ ವ್ಯವಸ್ಥಾಪಕರನ್ನು ಅಮಾನತುಗೊಳಿಸಿದೆ. ತಪ್ಪು ಮಾಡಿದ ವಿದ್ಯಾರ್ಥಿಗಳ ಮೇಲೆ ಗಂಭೀರ ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಭರವಸೆ ನೀಡಿದೆ. ಮೂಲಗಳ ಪ್ರಕಾರ ಅಪರಾಧಿಗಳಎಂದು ಹೇಳಲಾದ ಇಬ್ಬರು ಹಿರಿಯ ವಿದ್ಯಾರ್ಥಿಗಳನ್ನು ಪೋಲೀಸರು ಬಂಧಿಸಿದ್ದಾರೆ. ಕಾಲೇಜು ಪ್ರಾಂಶುಪಾಲರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. |