ನಾಲ್ಕು ಮಂದಿಯ ಸಾವಿಗೆ ಕಾರಣವಾಗಿರುವ, ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಮೇಲ್ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್ ವಿರುದ್ಧ ಪ್ರಕರಣ ದಾಖಲಿಸಲು ಬಿಹಾರದ ನ್ಯಾಯಾಲಯವೊಂದು ಪೊಲೀಸರಿಗೆ ಆದೇಶ ನೀಡಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಮುಜಾಫರ್‌ನಗರದಲ್ಲಿ ಈ ದುರಂತ ಸಂಭವಿಸಿತ್ತು.ಇಲ್ಲಿಗೆ 70 ಕಿಲೋ ಮೀಟರ್ ದೂರದಲ್ಲಿರುವ ಮುಜಾಫರ್‌ನಗರ್‌ದ ಛೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್, ಲಾಲೂ ಪ್ರಸಾದ್ ಅವರಲ್ಲದೆ, ಭಾರತೀಯ ರೈಲ್ವೇ ನಿರ್ಮಾಣ ನಿಗಮ(ಐಆರ್‌ಸಿಓಎನ್)ದ ಪ್ರಧಾನ ವ್ಯವಸ್ಥಾಪಕ ಗುಣಶೇಖರನ್, ಉಪ ಯೋಜನಾ ವ್ಯವಸ್ಥಾಪಕ ಎ.ಕೆ. ಸಿಂಗ್ ಮತ್ತು ಸಂಸ್ಥೆಯ ಇನ್ನೋರ್ವ ಅಧಿಕಾರಿ ರಾಕೇಶ್ ರೋಶನ್ ಇವರುಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲು ಆದೇಶದಲ್ಲಿ ತಿಳಿಸಿದೆ.ಇದಲ್ಲದೆ ಸಾಧ್ಯವಿರುವಷ್ಟು ಬೇಗ ಪ್ರಕರಣದ ತನಿಖೆ ಪೂರೈಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಫೆಬ್ರವರಿ 16ರಂದು ಜಿಲ್ಲೆಯ ಅಮೊಗ್ಲಾ ಎಂಬಲ್ಲಿ ನಡೆದ ಈ ದುರಂತದಲ್ಲಿ ನಾಲ್ವರು ಹತರಾಗಿದ್ದಾರೆ. ಮೇಲ್ಸೇತುವೆ ಕುಸಿದು ಸಂಭವಿಸಿದ ಈ ಅಪಘಾತದಲ್ಲಿ ತನ್ನ ಪತ್ನಿಯನ್ನು ಕಳೆದುಕೊಂಡ ಅಶೋಕ್ ಕುಮಾರ್ ಸಿಂಗ್ ಎಂಬವರು ಫೆಬ್ರವರಿ 17ರಂದು ರೈಲ್ವೇ ಸಚಿವರು ಹಾಗೂ ಐಆರ್‌ಸಿಓಎನ್ ಅಝಿಕಾರಿಗಳ ವಿರುದ್ಧ ಮೊಕದ್ದಮೆಯೊಂದನ್ನು ದಾಖಲಿಸಿದ್ದರು. |