ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಆಘಾತಕಾರಿ ಸಾವಿಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಹಿಮಾಚಲ ಪ್ರದೇಶ ಸರ್ಕಾರ ಆದೇಶಿಸಿದೆ. ಹದಿಹರೆಯ ವಿದ್ಯಾರ್ಥಿಯೊಬ್ಬ ಹಿರಿಯ ವಿದ್ಯಾರ್ಥಿಗಳ ರ‌್ಯಾಗಿಂಗ್‌ನಿಂದಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.ಅಮನ್ ಕಚ್ರು ಎಂಬ ವಿದ್ಯಾರ್ಥಿ ದುರ್ಮರಣಕ್ಕೀಡಾಗಿರುವ ನತದೃಷ್ಟನಾಗಿದ್ದಾನೆ. ನ್ಯಾಯಾಂಗ ತನಿಖೆಯಿಂದ ಈತನ ಸಾವಿನ ಕಾರಣವನ್ನು ಪತ್ತೆಹಚ್ಚಬಹುದಾಗಿದೆ ಮತ್ತು ಇದರಲ್ಲಿ ಪಾತ್ರವಹಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬಹುದಾಗಿದೆ ಎಂಬುದಾಗಿ ಆರೋಗ್ಯ ಸಚಿವ ರಾಜೀವ್ ಬಿಂದಾಲ್ ಹೇಳಿದ್ದಾರೆ.ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ವರದಿಯ ಆಧಾರದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಈ ದುರ್ಘಟನೆ ಸಂಭವಿಸಿರುವ ಡಾ| ರಾಜೇಂದ್ರ ಪ್ರಸಾದ್ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹೊಸ ಪ್ರಿನ್ಸಿಪಾಲರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಸನನ್ ಹೇಳಿದ್ದಾರೆ. ಈ ಘಟನೆಯ ಬಳಿಕ ಹಾಲಿ ಪ್ರಾಂಶುಪಾಲರಾದ ಸುರೇಶ್ ಸಂಖ್ಯಾಯನ್ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ವೈದ್ಯ ವಿದ್ಯಾರ್ಥಿ ಅಮನ್ ರ‌್ಯಾಗಿಂಗ್‌ಗೆ ಬಲಿ |