ಬಿಜೆಪಿಯ ಸಂಬಂಧ ಮುರಿದುಕೊಂಡಿರುವ ಬಿಜು ಜನತಾದಳವು ತೃತೀಯರಂಗಕ್ಕೆ ಸೇರಲು ಒಪ್ಪಿಗೆ ಸೂಚಿಸಿದೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಯನ್ನು ಅಲ್ಲಗಳೆದಿರುವ ಬಿಜು ಜನತಾ ದಳವು ಇಂತಹ ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸಿಲ್ಲ ಎಂದು ಹೇಳಿದೆ.
"ಗೌಡರ ಹೇಳಿಕೆಯನ್ನು ಟಿವಿಯಲ್ಲಿ ಆಲಿಸಿದ್ದೇನೆ. ಯಾವುದೇ ರಂಗ ಅಥವಾ ಮೈತ್ರಿಕೂಟಕ್ಕೆ ಸೇರುವ ಬದ್ಧತೆಯನ್ನು ನಾವು ಸೂಚಿಸಿಲ್ಲ" ಎಂಬುದಾಗಿ ಬಿಜೆಡಿ ವಕ್ತಾರ ದಾಮೋದರ್ ರಾವುತ್ ಹೇಳಿದ್ದಾರೆ.
"ಆದರೆ ನೀವು ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಮರಳುವ ಸಾಧ್ಯತೆ ಇದೆಯೇ" ಎಂದು ಪ್ರಶ್ನಿಸಿದಾಗ, ಪ್ರಸ್ತುತ ನಾವು ಎನ್‌ಡಿಎ ಜತೆಗೂ ಇಲ್ಲ, ಅಥವಾ ಯಾವುದೇ ರಂಗಕ್ಕೂ ಬದ್ಧವಾಗಿಲ್ಲ ಎಂದು ರಾವುತ್ ಸ್ಪಷ್ಟಪಡಿಸಿದ್ದಾರೆ.
"ನಮ್ಮದು ಪ್ರಾಂತೀಯ ಪಕ್ಷ. ಸಮಾನ ಮನಸ್ಸಿನ ಜಾತ್ಯತೀತ ಪಕ್ಷಗಳೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ನಾವೀಗ ಬಹುಮತ ಸಾಬೀತಿನ ಕುರಿತು ನಿರತರಾಗಿದ್ದೇವೆ ಮತ್ತು ನಾವು ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ. |