ಪ್ರಾದೇಶಿಕ ಪಕ್ಷ ಒಂದರ ಏಕೈಕ ಸದಸ್ಯ ಬೆಂಬಲ ಹಿಂತೆಗೆದುಕೊಂಡ ಕಾರಣ ಎನ್‌ಸಿಪಿ ನೇತೃತ್ವದ ಮೇಘಾಲಯ ಪ್ರಗತಿಪರ ಮೈತ್ರಿಕೂಟ(ಎಂಪಿಎ) ಸರ್ಕಾರವು ಅಲ್ಪಸಂಖ್ಯಾತವಾಗಿದ್ದು ಬಹುಮತ ಕಳೆದುಕೊಂಡಿದೆ.
ಖುನ್ ಹಿನ್ನಿವೆಟ್ರೆಪ್ ನ್ಯಾಶನಲ್ ಅವೇಕನಿಂಗ್ ಮೂವ್‌ಮೆಂಟ್(ಕೆಎಚ್ಎನ್ಎಎಂ) ಪಕ್ಷದ ಏಕೈಕ ಶಾಸಕ ನಗರಾಭಿವೃದ್ಧಿ ಸಚಿವ ಪೌಲ್ ಲಿಂಗ್ಡೋ ಅವರು ಮುಖ್ಯಮಂತ್ರಿ ದೋಂಕುಪಾರ್ ರಾಯ್ ಅವರಿಗೆ ತನ್ನ ರಾಜೀನಾಮೆ ಸಲ್ಲಿಸಿದ್ದಾರೆ. ಇತರ ಇಬ್ಬರು ಸ್ವತಂತ್ರ ಶಾಸಕರು ರಾಜೀನಾಮೆ ಸಲ್ಲಿಸಿರುವ ಮರುದಿನ ಲಿಂಗ್ಡೋ ಮೈತ್ರಿ ಮುರಿದುಕೊಂಡಿದ್ದಾರೆ.
"ಪರ್ಯಾಯ ಸರ್ಕಾರದ ನಿರ್ಮಾಣಕ್ಕಾಗಿ, ಎಂಪಿಎಯ ಅಡಿಗಲ್ಲುಗಳಲ್ಲಿ ಒಬ್ಬರಾಗಿರುವ ಪಿ.ಎ. ಸಂಗ್ಮಾ ಅವರು ಕಾಂಗ್ರೆಸ್ ಜತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ಎಂಪಿಎಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ಲಿಂಗ್ಡೂ ಅವರು ತನ್ನ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ಮೈತ್ರಿಕೂಟದಿಂದ ಹೊರನಡೆಯುವ ನಿರ್ಧಾರ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
60 ಸ್ಥಾನ ಬಲದ ಶಾಸನ ಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟವು ಇದೀಗ 30 ಸ್ಥಾನಗಳನ್ನು ಹೊಂದಿದೆ. ಇನ್ನೂ ಕೆಲವು ಶಾಸಕರು ಮೈತ್ರಿ ಮುರಿದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. |