ಹಿಮಾಚಲ ಪ್ರದೇಶದಲ್ಲಿ ರ‌್ಯಾಗಿಂಗ್‌ನಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ನಾಲ್ಕೂ ವಿದ್ಯಾರ್ಥಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಕಂಗ್ರಾ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕುಮಾರ್ ಫಲ್‌ಜೆಲೆ ಹೇಳಿದ್ದಾರೆ.ಅಮನ್ ಕಚ್ರು ಎಂಬ 19ರ ಹರೆಯ ವಿದ್ಯಾರ್ಥಿ ನಾಲ್ವರು ಹಿರಿಯ ವಿದ್ಯಾರ್ಥಿಗಳ ರ‌್ಯಾಗಿಂಗ್‌ನಿಂದಾಗಿ ಭಾನುವಾರ ಸಾವನ್ನಪ್ಪಿದ್ದ. ಕಂಗ್ರಾದಿಂದ 20 ಕಿಲೋಮೀಟರ್ ದೂರದಲ್ಲಿರುವ ತಂಡಾ ಪಟ್ಟಣದಲ್ಲಿರುವ ರಾಜೇಂದ್ರ ಪ್ರಸಾದ್ ಮೆಡಿಕಲ್ ಕಾಲೇಜಿನಲ್ಲಿ ಈ ದುರ್ಘಟನೆ ನಡೆದಿದೆ.ಆರೋಪಿ ವಿದ್ಯಾರ್ಥಿಗಳಾದ ಮುಕುಲ್ ಶರ್ಮಾ ಹಾಗೂ ಅಭಿನವ್ ವರ್ಮಾ ಅವರು ಮಂಗಳವಾರ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಇವರಿಬ್ಬರನ್ನು ಮಾರ್ಚ್ 16ರ ತನಕ ಪ್ರಶ್ನಿಸಲಾಗುತ್ತದೆ. ಇನ್ನಿಬ್ಬರಾದ ಅಜಯ್ ವರ್ಮಾ ಮತ್ತು ನವೀನ್ ವರ್ಮಾ ಎಂಬಿಬ್ಬರನ್ನು ಶುಕ್ರವಾರದ ತನಕ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಪ್ರಮುಖ ಶಂಕಿತರಲ್ಲೊಬ್ಬ ಹಿರಿಯ ಭೋದಕರ ಪುತ್ರ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಹುಡುಗನ ಸಾವಿಗೆ ತಲೆಗೆ ಏಟು ತಗುಲಿರುವುದು ಕಾರಣ ಎಂಬುದಾಗಿ ಮರಣೋತ್ತರ ಪರೀಕ್ಷೆ ತಿಳಿಸುತ್ತದೆ ಎಂದು ಅತುಲ್ ಕುಮಾರ್ ಹೇಳಿದ್ದಾರೆ.ಕಾಲೇಜು ಅಧಿಕಾರಿಗಳ ವಿರುದ್ಧ ಇದುವರೆಗೆ ಕೇಸು ದಾಖಲಾಗಿಲ್ಲ. ಕಾಲೇಜು ಪ್ರಾಧಿಕಾರದ ಲೋಪವೇನಾದರೂ ಇದ್ದರೆ, ಬೆಳಕಿಗೆ ತರುವ ನಿಟ್ಟಿನಲ್ಲಿ ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.ಹಿಮಾಚಲ ಪ್ರದೇಶ ಸರ್ಕಾರವು ಪ್ರಕರಣದ ನ್ಯಾಯಾಂಗ ತನಿಖೆಗೆ ಮಂಗಳವಾರ ಆದೇಶ ನೀಡಿದೆ. |